ದಾವಣಗೆರೆ: ರೂಪಾಂತರಿ ಕೊರೊನಾ ವೈರಸ್ ಎಲ್ಲರಲ್ಲೂ ಭಯದ ವಾತಾವರಣ ಸೃಷ್ಟಿಸಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಎಂದು ಸರ್ಕಾರವೇ ಎಲ್ಲರಿಗೂ ಸೂಚನೆ ನೀಡುತ್ತಿದೆ. ಜೊತೆಗೆ ದಂಡ ಕೂಡ ವಿಧಿಸುತ್ತಿದೆ. ಆದರೆ, ಸರ್ಕಾರದ ಬಹುಮುಖ್ಯ ಸಚಿವರೇ ಈ ನಿಯಮ ಪಾಲನೆ ಮಾಡುತ್ತಿಲ್ಲ ಎಂಬುದು ಪ್ರಶ್ನಾರ್ಥಕ ವಿಷಯವಾಗಿದೆ.
ಇಂದು ದಾವಣಗೆರೆ ಜಿಲ್ಲೆಯ ಹರಿಹರದ ಬೆಳ್ಳೂಡಿಯಲ್ಲಿರುವ ಕಾಗಿನೆಲೆ ಶಾಖಾ ಮಠದ ಆವರಣದಲ್ಲಿ ನಡೆದ ಎಸ್ಟಿ ಮೀಸಲಾತಿ ಚಿಂತನ ಸಭೆಯಲ್ಲಿ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪ ಮಾಸ್ಕ್ ಧರಿಸದೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಬಡವರು ಜನಸಾಮಾನ್ಯರು ಮಾಸ್ಕ್ ಧರಸದೆ ಸಂಚರಿಸಿದರೆ ದಂಡ ಸಂಗ್ರಹ ಮಾಡುವ ಸರ್ಕಾರದ ನಿಯಮ ಪಂಚಾಯತ್ ರಾಜ್ ಸಚಿವ ಕೆಎಸ್ ಈಶ್ವರಪ್ಪನವರಿಗೆ ಅನ್ವಯಿಸುವುದಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನೆ ಮಾಡಿದ್ದಾರೆ.
ಅದರಲ್ಲೂ ಬೆಂಗಳೂರಿನಲ್ಲಿ ಗಾರೆ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ ಮಹಿಳೆ ಮಾಸ್ಕ್ ಧರಿಸದೇ ಸಂಚರಿಸುತ್ತಿದ್ದನ್ನು ಕಂಡು ಮಾರ್ಷಲ್ ಗಳು 250 ರೂಪಾಯಿ ದಂಡ ವಸೂಲಿ ಮಾಡಿದ್ದು ರಾಜ್ಯದಲ್ಲೇ ಸಾಕಷ್ಟು ಸುದ್ದಿಯಾಗಿತ್ತು. ಈ ಹಿನ್ನೆಲೆ ಬಡವರಿಗೆ ಒಂದು ನ್ಯಾಯ ಸಚಿವರಿಗೆ ಒಂದು ನ್ಯಾಯವೇ ಎಂದು ಪ್ರಶ್ನೆ ಮಾಡುತ್ತಿದ್ದಾರೆ.