ದಾವಣಗೆರೆ: ಜನರಿಗೆ ತುರ್ತು ಸಂಧರ್ಭದಲ್ಲಿ ಸ್ಪಂದನೆಗಾಗಿ “ತುರ್ತು ಸ್ಪಂದನ ವ್ಯವಸ್ಥೆ-112” ಎಂಬ ಹೊಸ ವ್ಯವಸ್ಥೆಯನ್ನು ಜಿಲ್ಲೆಯಲ್ಲಿ ಜಾರಿಗೊಳಿಸಿದ್ದು, ಪೊಲೀಸ್, ಅಗ್ನಿ ಶಾಮಕ, ಆಂಬುಲೆನ್ಸ್ ಗಾಗಿ ಬೇರೆ ಬೇರೆ ಸಹಾಯವಾಣಿಗೆ ಕರೆ ಮಾಡುವ ಅಗತ್ಯವಿಲ್ಲ, ಕೇವಲ ಈ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಈ ಎಲ್ಲಾ ಸಮಸ್ಯೆಗಳಿಗೂ ತುರ್ತು ಸೇವೆ ನಿಮಗೆ ಲಭಿಸಲಿದೆ ಎಂದು ಎಸ್‍ಪಿ ಹನುಮಂತರಾಯ ತಿಳಿಸಿದ್ದಾರೆ
ಈ ಸೇವೆಯು ಅಕ್ಟೋಬರ್ 01 ರಿಂದ ಜಿಲ್ಲೆಯಲ್ಲಿ ಆರಂಭಗೊಂಡಿದೆ. ರಾಜ್ಯದ ಮೂರು ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿ ಈ ಸಹಾಯವಾಣಿ ಜಾರಿಯಾಗಿದ್ದು ಇದರಲ್ಲಿ ದಾವಣಗೆರೆ ಜಿಲ್ಲೆಯೂ ಒಳಗೊಂಡಿದೆ. ಅಗ್ನಿ ಶಾಮಕ ದಳ, ಆಂಬುಲೆನ್ಸ್, ಪೊಲೀಸ್ ನೆರವು ಸೇರಿದಂತೆ ಯಾವುದೇ ತುರ್ತು ಸಂದರ್ಭದಲ್ಲಿ ನೂತನವಾದ 112 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿದರೆ ಸಾಕು. ಎಮರ್ಜೆನ್ಸಿ ರೆಸ್ಪಾನ್ಸ್ ಸಪೋರ್ಟ್ ಸಿಸ್ಟಮ್ ವ್ಯವಸ್ಥೆಯಡಿ ಜಿಲ್ಲೆಯ ಎಲ್ಲಿದಂಲೇ ಕರೆ ಬಂದರೂ ತುರ್ತಾಗಿ ಅಲ್ಲಿಗೆ ತಲುಪಿ ರಕ್ಷಣೆ ಒದಗಿಸಲಾಗುತ್ತದೆ ಎಂದಿದ್ದಾರೆ.
ಈ ನಂಬರ್ ಗೆ ಕರೆ ಮಾಡಿದರೆ ನೇರವಾಗಿ ಬೆಂಗಳೂರಿನಿಂದ ಏಕೀಕೃತ ತರ್ತು ಸ್ಪಂದನಾ ಕೇಂದ್ರದ ಮೂಲಕ ಜಿಲ್ಲಾ ಸಮನ್ವಯ ಕೇಂದ್ರಕ್ಕೆ ಸಂಪರ್ಕಿಸಲಾಗುತ್ತದೆ. ಕರೆ ಸ್ವೀಕರಿಸಿದ ತಕ್ಷಣ ಘಟನಾ ಸ್ಥಳಕ್ಕೆ 15 ನಿಮಿಷದಲ್ಲಿಯೇ ಇಆರ್‍ಎಸ್‍ಎಸ್ ವಾಹನ ತಲುಪಿ ಸಂಕಷ್ಟದಲ್ಲಿರುವವರಿಗೆ ತುರ್ತು ನೆರವಾಗುವ ವ್ಯವಸ್ಥೆ ಇದಾಗಿದೆ.
ಇಲಾಖೆಯಿಂದ ಜಿಲ್ಲೆಗೆ ಈ ಉದ್ದೇಶಕ್ಕಾಗಿಯೇ 13 ಬೀಟ್ ವಾಹನ ನೀಡಲಾಗಿದೆ. ಒಂದು ವಾಹನದಲ್ಲಿ ಎಎಸ್‍ಐ, ಕಾನ್ ಸ್ಟೇಬಲ್, ಚಾಲಕ ಸೇರಿ ಮೂರು ಸಿಬ್ಬಂದಿ ಇರುತ್ತಾರೆ. ಸಂರಕ್ಷಣಾ ಸಲಕರಣೆಗಳು ಇಆರ್‍ಎಸ್‍ಎಸ್ ವಾಹನದಲ್ಲಿರುತ್ತವೆ. 24x7 ತುರ್ತು ಸ್ಪಂದನಾ ಕರ್ತವ್ಯಕ್ಕೆ ಈಗಾಗಲೇ 65 ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ 26 ಚಾಲಕ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ದಿನದ 24 ತಾಸು ಪ್ರಾಯೋಗಿಕವಾಗಿ ಚಟುವಟಿಕೆ ಪ್ರಾರಂಭವಾಗಿದೆ.
ಇನ್ನು ಮುಂದೆ ಪೊಲೀಸ್ ಇಲಾಖೆಯ ಕಂಟ್ರೋಲ್ ರೂಮ್-100, ಅಗ್ನಿಶಾಮಕದ-101, ಆರೋಗ್ಯ ಇಲಾಖೆಯ-108 ಸಹಾಯವಾಣಿ ಸಂಖ್ಯೆಗಳು ನೂತನ ಸಹಾಯವಾಣಿ ಸಂಖ್ಯೆ 112 ರಲ್ಲಿ ವಿಲೀನವಾಗಿದೆ. ತುರ್ತು ಸಹಾಯವಾಣಿ ನೆರವು ಪಡೆಯಲು ನೇರ ಕರೆ ಮಾಡಬಹುದು ಅಥವಾ ಗೂಗಲ್ ಪ್ಲೇ ಸ್ಟೋರ್ ಮತ್ತು ಐಓಎಸ್ ಆ್ಯಪ್ ಸ್ಟೋರ್ನಲ್ಲಿ ಕೆಪಿಎಸ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಬಹುದು ಎಂದು ಅವರು ತಿಳಿಸಿದರು.