ದಾವಣಗೆರೆ: ಜಿಲ್ಲೆಯಲ್ಲಿ ಒಂದೇ ದಿನ 21 ಕೊರೊನಾ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್ ಉಪಸ್ಥಿತಿಯಲ್ಲಿ ಡಿಸಿ ಮಹಾಂತೇಶ್ ಆರ್. ಬೀಳಗಿ, ಎಸ್ಪಿ ಹನುಮಂತರಾಯ ಮುಂದಿನ ಕ್ರಮ ತೆಗೆದುಕೊಳ್ಳುವ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಯಿತು.
ಸಭೆ ಬಳಿಕ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ್, ದಾವಣಗೆರೆಯಲ್ಲಿ 21 ಪ್ರಕರಣ ಪಾಸಿಟಿವ್ ಬಂದಿರುವುದು ಆಘಾತ ತಂದಿದೆ. ಈ ವರದಿ ಬರುತ್ತೆಂದು ನಿರೀಕ್ಷೆ ಮಾಡಿರಲಿಲ್ಲ. ಒಟ್ಟು 31 ಸೋಂಕಿತರಿದ್ದು, ಒಬ್ಬ ವೃದ್ಧ ಸಾವನ್ನಪ್ಪಿದ್ದಾನೆ. ಇಬ್ಬರು ಗುಣಮುಖರಾಗಿದ್ದರೆ, ಒಟ್ಟು 28 ಆ್ಯಕ್ಟೀವ್ ಕೊರೊನಾ ಸೋಂಕಿತರಿದ್ದಾರೆ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಈ ನಿಟ್ಟಿನಲ್ಲಿ ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಲಿವೆ. ಇದೀಗ ಕೊರೊನಾ ವಿರುದ್ಧ ಯುದ್ಧ ಮಾಡುವ ಸಮಯ ಬಂದಿದೆ ಎಂದು ಹೇಳಿದರು.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಲಾಕ್ಡೌನ್ ಆಗಬಹುದು. ಗ್ರೀನ್ ಝೋನ್ನಲ್ಲಿದ್ದ ದಾವಣಗೆರೆ ರೆಡ್ ಝೋನ್ಗೆ ಬರಬಹುದು ಎಂಬುದು ನನ್ನ ಅನಿಸಿಕೆ. ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ತೆಗೆದುಕೊಳ್ಳಲಿದೆ. ಇಷ್ಟೊಂದು ಪ್ರಮಾಣದಲ್ಲಿ ಸೋಂಕಿತರು ಇರುವುದರಿಂದ ಕಂಟೈನ್ಮೆಂಟ್ ಝೋನ್ ಆಗಲಿದೆ. ದವಸ ಧಾನ್ಯ ಸೇರಿದಂತೆ ಬೇರೆ ವಸ್ತುಗಳು ಈ ಪ್ರದೇಶದಲ್ಲಿ ಸಿಗುವುದು ಅನುಮಾನ. ಪಾಲಿಕೆಯಿಂದ ಆನ್ಲೈನ್ ಹಾಗೂ ಸಹಾಯವಾಣಿ ಮೂಲಕ ಜನರು ಪಡೆಯಬಹುದಾಗಿದೆ ಎಂದು ಹೇಳಿದರು.
ಇದೇ ವೇಳೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮಾತನಾಡಿ, ನಗರದಲ್ಲಿ ಯಾವ ರೀತಿಯಲ್ಲಿ ಕ್ರಮ ಕೈಗೊಳ್ಳಬೇಕೆಂಬ ಬಗ್ಗೆ ಚರ್ಚೆ ಮಾಡಿ ನಿರ್ಧಾರ ಮಾಡುತ್ತೇವೆ. ಕಂಟೈನ್ಮೆಂಟ್ ಝೋನ್ ಹೊರತುಪಡಿಸಿ ಬೇರೆ ಕಡೆಗಳಲ್ಲಿ ಯಾವ ರೀತಿ ಇರಬೇಕೆಂಬ ರೂಪುರೇಷೆ ಸಿದ್ಧಪಡಿಸಲಾಗುವುದು. 556 ಹಾಗೂ 533 ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರ ಮೇಲೆ ನಿಗಾ ವಹಿಸಲಾಗಿದೆ. ಉಳಿದವರ ವರದಿಗಾಗಿ ಕಾಯುತ್ತಿದ್ದೇವೆ ಎಂದು ತಿಳಿಸಿದರು.
ಪಾಲಿಕೆ ವ್ಯಾಪ್ತಿಯಲ್ಲಿ ಮದ್ಯ ನಿಷೇಧ...!
28 ಆ್ಯಕ್ಟೀವ್ ಕೊರೊನಾ ಪ್ರಕರಣ ಇರುವ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ವ್ಯಾಪ್ತಿಯ 45 ವಾರ್ಡ್ಗಳಲ್ಲಿ ಮದ್ಯ ಮಾರಾಟ ಇರುವುದಿಲ್ಲ. ಮದ್ಯ ಮಾರಾಟ ನಿಷೇಧ ಮಾಡಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಅಬಕಾರಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸೂಚನೆ ನೀಡಿದರು.