ದಾವಣಗೆರೆ : ಶಾಸಕ ಶಾಮನೂರು ಶಿವಶಂಕರಪ್ಪರ ಕುಟುಂಬ ದೂಡಾ ವ್ಯಾಪ್ತಿಯಲ್ಲಿ ಎಸಗಿರುವ ಅಕ್ರಮಗಳೆಲ್ಲವನ್ನೂ ಒಂದೊಂದಾಗೆ ಬಯಲಿಗೆಳೆಯುತ್ತೇನೆ. ಶಾಮನೂರು ಕುಟುಂಬಕ್ಕೆ ಅಧಿಕಾರ ಬೇಕಿರುವುದು ಅಕ್ರಮಗಳನ್ನು ಉಳಿಸಿಕೊಳ್ಳಲು ಎಂದು ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಮನೂರು ಪುತ್ರ ಹಾಗೂ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಸಚಿವರಾಗಿದ್ದಾಗ ನಿರ್ಮಿತಿ ಕೇಂದ್ರಕ್ಕೆ ಬಿಡುಗಡೆ ಮಾಡಲಾಗಿದ್ದ ಒಂದೂವರೆ ಕೋಟಿ ರೂ. ಹಣ ದುರುಪಯೋಗ ಆಗಿರುವುದು ಸ್ಪಷ್ಟವಾಗಿದೆ.
ಸರ್ ಮಿರ್ಜಾ ಇಸ್ಮಾಯಿಲ್ ನಗರದಲ್ಲಿ ಹಾದು ಹೋಗಿರುವ ವರ್ತುಲ ರಸ್ತೆಯಲ್ಲಿ ಅನಧಿಕೃತವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿರುವವರಿಗೆ ಪುನರ್ವಸತಿ ಕಲ್ಪಿಸುವ ಉದ್ದೇಶದಿಂದ ದೂಡಾದಿಂದ ಹಣ ನೀಡಲಾಗಿತ್ತು.
ಆದರೆ, ಪುನರ್ವಸತಿ ಕಲ್ಪಿಸುವ ಕೆಲಸ ಆಗಿಲ್ಲ. ನಿರ್ಗತಿಕರು ಈಗಲೂ ಅಲ್ಲೇ ಇದ್ದಾರೆ. ಹಾಗಿದ್ದರೆ ಇಷ್ಟೊಂದು ಹಣ ಎಲ್ಲಿ ಹೋಯ್ತು.? ಈ ಬಗ್ಗೆ ಸಮಗ್ರ ತನಿಖೆ ನಡೆಸಲು ಪ್ರಾಧಿಕಾರದ ಸಭೆಯಲ್ಲಿ ನಿರ್ಧರಿಸಲಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ ಖಚಿತ ಎಂದು ಹೇಳಿದರು.
ಐದೇ ನಿಮಿಷದಲ್ಲಿ ಮುಗಿದು ಹೋದ ಕೃಷ್ಣಾ-ಕಾವೇರಿ ಜಲ ನಿಗಮ ಸಭೆ
ಎಸ್ ಎಸ್ ಗಣೇಶ್ ಮಾಲೀಕತ್ವದ ಎಸ್ ಎಸ್ ಮಾಲ್ನಲ್ಲಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ಕಾನೂನು ಪ್ರಕಾರ ಹೋರಾಟ ಮಾಡಿ ವಶಪಡಿಸಿಕೊಳ್ಳಲಾಗುವುದು. ಸರ್ಕಾರಿ ರಸ್ತೆ ಜಾಗವನ್ನು ಏಕನಿವೇಶನ ಮಾಡಿಕೊಂಡು ದುರುಪಯೋಗ ಮಾಡಿಕೊಂಡಿರುವುದು ಗೊತ್ತಾಗಿದೆ.
ವಶಪಡಿಸಿಕೊಳ್ಳುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಲಾಗಿದೆ. ಸರ್ಕಾರಿ ಜಾಗವನ್ನು ಒತ್ತುವರಿ ಮಾಡಿದ್ದರೆ ಎಷ್ಟೇ ಪ್ರಭಾವಿಗಳಾದ್ರೂ ಬಿಡುವುದಿಲ್ಲ. ರಾಜನಹಳ್ಳಿ ವಂಶಸ್ಥರು ತಮ್ಮ ಸಾವಿರಾರು ಕೋಟಿ ರೂ. ಆಸ್ತಿಯನ್ನು ದಾನ ಮಾಡಿದ್ದಾರೆ. ಆದ್ರೆ, ಶಾಮನೂರು ಕುಟುಂಬ ನಕಲಿ ದಾನಿಗಳು. ಆಸ್ತಿ, ಹಣ ಲೂಟಿ ಹೊಡೆದಿರುವುದನ್ನು ದಾಖಲೆ ಸಮೇತ ತೋರಿಸುತ್ತೇನೆ ಎಂದು ತಿಳಿಸಿದರು.
ಸರ್ಕಾರದ ಆಸ್ತಿ ಸರ್ಕಾರಕ್ಕೆ ವಾಪಸ್ ತರಬೇಕೆಂಬುದಷ್ಟೇ ನನ್ನ ಧ್ಯೇಯ. ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇನೆ. ಬಾತಿ ಹಾಗೂ ಕುಂದುವಾಡ ಕೆರೆ ಜಾಗ ಒತ್ತುವರಿ ಮಾಡಿದ್ದ ಜಾಗ ವಾಪಸ್ ಪಡೆಯಲಾಗಿದೆ.
ಸುಮಾರು ₹50 ಕೋಟಿ ಮೌಲ್ಯದ ಆಸ್ತಿ ವಾಪಸ್ ಪಡೆಯಲಾಗಿದೆ. ಮುಂಬರುವ ದಿನಗಳಲ್ಲಿ ಸುಮಾರು 250 ರಿಂದ 300 ಕೋಟಿ ರೂ. ಮೌಲ್ಯದ ಒತ್ತುವರಿ ಆಸ್ತಿಯನ್ನು ಸರ್ಕಾರಕ್ಕೆ ಮರಳಿಸಬೇಕೆಂಬ ಗುರಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿದರು.