ದಾವಣಗೆರೆ: ನಾನು ಹೊಸ ವರ್ಷದ ಹಿನ್ನೆಲೆ ಬರ ಅಧ್ಯಯನಕ್ಕೆ ಬಂದಿದ್ದೇನೆಯೇ ಹೊರತು ಬೂಟಾಟಿಕೆ ಮಾಡಲು ಬಂದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹೇಳಿದ್ದಾರೆ. ದಾವಣಗೆರೆ ತಾಲೂಕಿನ ಜಮ್ಮಾಪುರ ಗ್ರಾಮದಲ್ಲಿ ಬರ ಅಧ್ಯಯನ ಮಾಡಿದ ಬಳಿಕ ಮಾಧ್ಯಮಗಳ ಜೊತೆ ಅವರು ಮಾತನಾಡಿದರು.
"ನಾನು ದಲಿತ ಕುಟುಂಬದ ರೈತರ ಜಮೀನಿಗೆ ಬಂದಿದ್ದೇನೆ. ಸಿಎಂ ಅಲ್ಪಸಂಖ್ಯಾತರ ಓಲೈಕೆ ಮಾಡಲು ಆರಂಭಿಸಿದ್ದಾರೆ. ಅವರಿಗೆ 10 ಸಾವಿರ ಕೋಟಿ ಅನುದಾನ ಮಂಜೂರು ಮಾಡುತ್ತೇವೆ ಎಂದು ಈಗಾಗಲೇ ಘೋಷಣೆ ಮಾಡಿದ್ದಾರೆ. ಆಗ ಮಾತ್ರ ಕೇಂದ್ರ ಸರ್ಕಾರದ ಕಡೆ ಕೈ ತೋರಿಸುವುದಿಲ್ಲ. ಬರದ ಬಗ್ಗೆ ಮಾತನಾಡಿದರೆ ಮಾತ್ರ ಕೇಂದ್ರದ ಕಡೆ ಕೈ ತೋರಿಸುತ್ತಾರೆ. ಸಿಎಂ ಸಿದ್ದರಾಮಯ್ಯ ಅವರ ಮೊದಲ ಆದ್ಯತೆ ಕೇವಲ ಅಲ್ಪಸಂಖ್ಯಾತರು. ಹಿಂದೂಗಳ ಬಗ್ಗೆ ಯಾವುದೇ ಆದ್ಯತೆ ನೀಡುತ್ತಿಲ್ಲ. ಹಿಂದೂಗಳೆಂದರೆ ಕೇವಲ ಲಿಂಗಾಯತರು, ಬ್ರಾಹ್ಮಣರು ಅಲ್ಲ, ದಲಿತರು, ಹಿಂದುಳಿದ ರೈತರೂ ಸೇರುತ್ತಾರೆ" ಎಂದು ಹೇಳಿದರು.
"ನಾನು ರೈತರ ಜಮೀನುಗಳಿಗೆ ಭೇಟಿ ನೀಡಿದಂತಹ ಸಂದರ್ಭದಲ್ಲಿ ರೈತ ಮಹಿಳೆಯರು ಕಣ್ಣೀರು ಹಾಕುತ್ತಿದ್ದರು. ರಾಜ್ಯ ಸರ್ಕಾರ ಬರ ಪರಿಹಾರವನ್ನು ಕೇವಲ ಘೋಷಣೆ ಮಾಡಿದರೆ ಸಾಲದು, ಅದನ್ನು ಕಾರ್ಯರೂಪಕ್ಕೂ ತರಬೇಕಾಗಿದೆ. ಪ್ರಧಾನಿ ಮೋದಿ ಮಾಡಿದಂತೆ, ನೇರವಾಗಿ ರೈತರ ಖಾತಗೆ ಹಣ ಜಮಾವಣೆ ಮಾಡಬೇಕಿದೆ" ಎಂದರು.
ಮೈಸೂರಿನಲ್ಲಿ ಚುನಾವಣಾ ರಾಜಕಾರಣ ನಡೆಯುತ್ತಿದೆ: "ಮೈಸೂರಿನಲ್ಲಿ ಸದ್ಯ ಚುನಾವಣಾ ರಾಜಕಾರಣ ನಡೆಯುತ್ತಿದೆ. ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಹತಾಶ ಮನೋಭಾವದಲ್ಲಿದೆ. ಪ್ರತಾಪ್ ಸಿಂಹ ಅವರ ಸಹೋದರ ಮರ ಕಡಿದ ಪ್ರಕರಣ ಕೇವಲ ರಾಜಕೀಯ ಪ್ರೇರಿತವಾಗಿದೆ. ಅದು ಇಡೀ ರಾಜ್ಯದ ಜನತೆಗೆ ಗೊತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್ ಹತಾಶೆಯಿಂದ ಈ ರೀತಿ ವರ್ತಿಸುತ್ತಿದೆ. ಸಂಸದ ಪ್ರತಾಪ್ ಸಿಂಹ ಅವರ ಸಹೋದರನ ಪರವಾಗಿ ನಾವು ಇದ್ದೇವೆ. ಲೋಕಸಭಾ ಚುನಾವಣೆಗೆ ಪ್ರತಾಪ್ ಸಿಂಹ ಹೆಸರು ಕೆಡಿಸಲು ಈ ರೀತಿ ಮಾಡ್ತಾ ಇದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.
ಜಮ್ಮಾಪುರ ಗ್ರಾಮದ ದಲಿತ ರೈತರಾದ ಮರಳಪ್ಪ -ಸಿದ್ದಮ್ಮ ಜಮೀನಿಗೆ ವಿಜಯೇಂದ್ರ ಹಾಗೂ ತಂಡ ಭೇಟಿ ನೀಡಿ ಬರ ಅಧ್ಯಯನ ಮಾಡಿದರು. ಈ ವೇಳೆ ಕಣ್ಣೀರು ಹಾಕಿದ ರೈತ ಮಹಿಳೆಗೆ ಹಸಿರುಶಾಲು ಹಾಕಿ ಹಣ್ಣು ನೀಡಿ ಸಮಾಧಾನ ಮಾಡಿದರು. ಅವರ ನಾಲ್ಕು ಎಕರೆ ಜಮೀನಿನಲ್ಲಿ ಮೆಕ್ಕೆಜೋಳ ಹಾಳಾಗಿರುವ ಬಗ್ಗೆ ಮಾಹಿತಿ ಕಲೆಹಾಕಿದರು.
ಇದನ್ನೂ ಓದಿ: ಪಕ್ಷದ ರಾಜ್ಯಾಧ್ಯಕ್ಷನಾಗಿ ನನ್ನ ಗುರಿ ಲೋಕಸಭಾ ಚುನಾವಣೆ: ಬಿ ವೈ ವಿಜಯೇಂದ್ರ