ದಾವಣಗೆರೆ: ಮತದಾರರ ಪಟ್ಟಿಗಳ ವಿಶೇಷ ಪರಿಷ್ಕರಣೆ ಸೆ. 1ರಿಂದ ಅಕ್ಟೋಬರ್ 15ರವರೆಗೆ ನಡೆಯಲಿದೆ. ಈ ಕುರಿತಂತೆ ಈಗಾಗಲೇ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಅಧಿಕಾರಿಗಳು ಕೆಲಸ ಮಾಡಬೇಕು. ಇಲ್ಲದಿದ್ದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಈ ಸಂಬಂಧ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ಚುನಾವಣಾ ಆಯೋಗದ ನಿರ್ದೇಶನದ ಪ್ರಕಾರ ಮತಗಟ್ಟೆ ಅಧಿಕಾರಿಗಳು ಕೆಲಸ ಮಾಡಬೇಕು. ಈಗಾಗಲೇ ಅವರಿಗೆ ಸೂಕ್ತ ತರಬೇತಿಯನ್ನೂ ಕೊಡಲಾಗಿದೆ. ಆದರೂ, ಅನಾವಶ್ಯಕವಾಗಿ ಜನರಿಗೆ ಆ ದಾಖಲಾತಿ ನೀಡಿ, ಈ ದಾಖಲಾತಿ ಬೇಕು ಎಂದು ನಿರ್ಲಕ್ಷ್ಯ ಧೋರಣೆ ತಾಳಿದರೆ ಅಂತಹ ಅಧಿಕಾರಿ ವಿರುದ್ಧ ಕ್ರಮ ಖಚಿತ ಎಂದು ಹೇಳಿದರು.
ಜಿಲ್ಲೆಯಲ್ಲಿ ಜನರ ಬಳಿಗೆ ಆಡಳಿತವನ್ನು ತೆಗೆದುಕೊಂಡು ಹೋಗಬೇಕು ಎಂಬ ಬಯಕೆ ನನ್ನದು. ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಸಲುವಾಗಿ ಜಿಲ್ಲಾಧಿಕಾರಿ ಕಚೇರಿ, ತಹಶೀಲ್ದಾರ್ ಹಾಗೂ ಉಪ ವಿಭಾಗಾಧಿಕಾರಿ ಕಚೇರಿಗಳಲ್ಲಿ ನಾಗರಿಕ ಮಿತ್ರ ಕೇಂದ್ರ ಪ್ರಾರಂಭಿಸಲು ಉದ್ದೇಶ ಹೊಂದಿರುವುದಾಗಿ ತಿಳಿಸಿದರು.
ಸರ್ವೇ, ಖಾತೆ, ಪಿಂಚಣಿ ವಿಚಾರದಲ್ಲಿ ವಿಶೇಷವಾಗಿ ರೈತರಿಗೆ ಕಿರುಕುಳ ಆಗುತ್ತಿದೆ ಎಂಬ ವಿಚಾರ ನನ್ನ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸೆ. 1ರಿಂದ ಮನೆ ಮನೆಗೆ ತೆರಳಿ ಗ್ರಾಮ ಲೆಕ್ಕಾಧಿಕಾರಿಗಳಿಂದ ಸಮೀಕ್ಷೆ ನಡೆಸಲಾಗುತ್ತಿದೆ. ಸರ್ಕಾರಿ ಯೋಜನೆಯಿಂದ ವಂಚಿತ ಫಲಾನುಭವಿಗಳಿಂದ ಅರ್ಜಿ ಪಡೆದು, ಗ್ರಾಮ ಲೆಕ್ಕಾಧಿಕಾರಿಗಳೇ ಮಂಜೂರಾತಿ ಪತ್ರವನ್ನು ಮನೆಗೆ ತಲುಪಿಸುವಂತೆ ಆದೇಶಿಸಿರುವುದಾಗಿ ಹೇಳಿದರು.