ದಾವಣಗೆರೆ: ಜಿಲ್ಲೆಯಲ್ಲಿ ಆರು ಮಂದಿ ಗರ್ಭಿಣಿಯರಿಗೆ ಕೊರೊನಾ ಸೋಂಕು ತಗುಲಿದ್ದು, ಈ ಪೈಕಿ ಇಬ್ಬರಿಗೆ ಸಹಜ ಹೆರಿಗೆ ಆಗಿದೆ. ಇನ್ನೊಬ್ಬ ಗರ್ಭಿಣಿಗೆ ಶಸ್ತ್ರ ಚಿಕಿತ್ಸೆ ಮೂಲಕ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ತಿಳಿಸಿದರು.
ಮಕ್ಕಳ ಗಂಟಲು ದ್ರವ ಪರೀಕ್ಷೆ ಸಂಗ್ರಹಿಸಿಲ್ಲ. ತಜ್ಞ ವೈದ್ಯರ ಸಲಹೆ ಪಡೆದು ಸ್ವ್ಯಾಬ್ ಸಂಗ್ರಹಿಸಿ ಕೊಡಲಾಗುವುದು. ವರದಿ ಬಂದ ಬಳಿಕ ಹಸುಗೂಸುಗಳಿಗೆ ಸೋಂಕು ತಗುಲಿದೆಯೋ ಇಲ್ಲವೋ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು.
ಒಂದೇ ಕಿಡ್ನಿ ಹೊಂದಿದ್ದ 65 ವರ್ಷದ ವೃದ್ಧೆ ಅನಾರೋಗ್ಯದಿಂದ ಬಳಲುತ್ತಿದ್ದರು. 69 ವರ್ಷದ ವೃದ್ಧರನ್ನು ಕೊರೊನಾದಿಂದ ಗುಣಪಡಿಸಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕಳುಹಿಸಿ ಅವರ ಕಾಲಲ್ಲಿದ್ದ ಗ್ಯಾಂಗ್ರಿನ್ ತೆಗೆದು ಗುಣಪಡಿಸಲಾಗಿದೆ ಎಂದು ವಿವರಿಸಿದರು.
ಹೃದ್ರೋಗ ಮತ್ತು ಹೈಪರ್ ಟೆನ್ಶನ್ ನಿಂದ ಬಳಲುತ್ತಿದ್ದ 68 ವರ್ಷದ ವೃದ್ಧೆ, ಸೈಕೋಸಿಸ್ ಕಾಯಿಲೆಯಿಂದ ಬಳಲುತ್ತಿದ್ದ 26 ವರ್ಷದ ಯುವತಿ, ಗಂಭೀರ ನ್ಯುಮೊನಿಯಾ ಮತ್ತು ಹೈಪರ್ ಟೆನ್ಶನ್ ನಿಂದ ಬಳಲುತ್ತಿದ್ದ 73 ವರ್ಷದ ವೃದ್ಧೆಯನ್ನೂ ಸಹ ಗುಣಪಡಿಸಲಾಗಿದೆ. ಇದೇ ರೀತಿಯಲ್ಲಿ ತೀವ್ರತರನಾದ ಕಾಯಿಲೆಯಿದ್ದ ಸೋಂಕಿತರನ್ನು ಗುಣಪಡಿಸಿದ್ದೇವೆ ಎಂದರು.
ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮುನ್ನೆಚ್ಚರಿಕಾ ಕ್ರಮ: ಮೂವರು ಪೊಲೀಸ್ ಸಿಬ್ಬಂದಿ ಕೊರೊನಾದಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದು, ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿ ಠಾಣಾ ವ್ಯಾಪ್ತಿಯಲ್ಲಿಯೂ ಸ್ಯಾನಿಟೇಷನ್, ಸ್ವಚ್ಛತೆ ಕಾರ್ಯ ಮಾಡಲಾಗುತ್ತಿದೆ. ಸಿಬ್ಬಂದಿಗೆ ಅದರಲ್ಲಿಯೂ ವಿಶೇಷವಾಗಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿಗೆ ಜಾಗೃತಿ ವಹಿಸುವಂತೆ ಸೂಚಿಸಲಾಗಿದೆ ಎಂದರು.