ದಾವಣಗೆರೆ: ಎರಡು ದಿನಗಳಲ್ಲಿ ಇಬ್ಬರು ವೃದ್ಧೆಯರು ಕೊರೊನಾಕ್ಕೆ ತುತ್ತಾಗಿದ್ದು ಕರ್ತವ್ಯ ಲೋಪ ಕಂಡುಬಂದ ಕಾರಣ ವೈದ್ಯರು ಹಾಗೂ ಸಿಬ್ಬಂದಿಗೆ ಕಾರಣ ಕೇಳಿ ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ನೋಟಿಸ್ ಜಾರಿ ಮಾಡಿದ್ದಾರೆ.
ಜಾಲಿ ನಗರದ 80 ವರ್ಷದ ವೃದ್ಧೆ ಹಾಗೂ 83 ವರ್ಷದ ದೇವರಬೆಳಕೆರೆಯ ವೃದ್ಧೆಯನ್ನು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಸೇರಿಸಿದ್ದರೆ ಸೂಕ್ತ ಚಿಕಿತ್ಸೆ ಕೊಡಿಸಬಹುದಿತ್ತು. ಆದರೆ ಈ ಕಾರ್ಯ ಆಗಿಲ್ಲ. ಕೇವಲ ಮಾಹಿತಿ ನೀಡಿದರೆ ಸಾಲದು, ಆಸ್ಪತ್ರೆಗೆ ಸೇರಿಸುವವರೆಗೆ ನಿಗಾ ವಹಿಸಬೇಕಿತ್ತು. ಹಾಗಾಗಿ ಲೋಪ ಎಸಗಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಜಾಲಿನಗರದ ಕಂಟೈನ್‌ಮೆಂಟ್ ಝೋನ್‌ನಲ್ಲಿ ಅತಿ ಹೆಚ್ಚು ಸೋಂಕಿತ ಪ್ರಕರಣಗಳು ದಾಖಲಾಗಿವೆ. ರೋಗಿಯ ಆರೋಗ್ಯಸ್ಥಿತಿ ಗಂಭೀರವಾಗುವವರೆಗೆ ರೋಗದ ಮಾಹಿತಿ ನೀಡಲು ಕಾಯದೇ ತಕ್ಷಣ ಚಿಕಿತ್ಸೆ ನೀಡಬೇಕು. ಚಿಕ್ಕ ಮಕ್ಕಳು ಹಾಗೂ 60 ವರ್ಷ ಮೇಲ್ಪಟ್ಟವರಲ್ಲಿ ರೋಗದ ಲಕ್ಷಣ ಕಂಡು ಬಂದರೆ ಕೋವಿಡ್ ಜಿಲ್ಲಾಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಬೇಕು. ಆಶಾ ಕಾರ್ಯಕರ್ತೆಯರು ಸರ್ವೇಕ್ಷಣಾ ಕಾರ್ಯಕ್ಕೆ ಬಂದಾಗ ಮಾಹಿತಿ ನೀಡಿ ಸಹಕರಿಸಿದ್ದಲ್ಲಿ ರೋಗ ನಿಯಂತ್ರಣ ಸಾಧ್ಯ ಎಂದು ಹೇಳಿದರು.
ಮಾಸ್ಕ್ ಧರಿಸುವ ಅಭಿಯಾನ:
ಜನನಿಬಿಡ ಪ್ರದೇಶದಲ್ಲಿ ಮಾಸ್ಕ್ ಧರಿಸುವ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಬಾರದೆಂಬ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ವಿಶೇಷ ಅಭಿಯಾನ ಏರ್ಪಡಿಸಲಾಗುವುದು. ನಗರದ ಹಾಗೂ ತಾಲೂಕು ಪ್ರದೇಶಗಳಲ್ಲಿ ಜನರು ಕಡ್ಡಾಯವಾಗಿ ಮುಖಗವಸು ಹಾಕಿಕೊಳ್ಳಲೇಬೇಕು. ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮೂರು ಹೊಸ ಕಂಟೈನ್‌ಮೆಂಟ್ ಝೋನ್‌ಗಳು:
ಬೇತೂರು ರಸ್ತೆಯ ದೇವರಾಜನಗರ, ಎಸ್‌ಎಸ್ ಲೇಔಟ್‌ನ ಎಂಎಂ ಟರ್ಕರ್ಸ್ ಅಪಾರ್ಟ್ ಮೆಂಟ್, ಕೆಟಿಜೆ ನಗರ ಪೊಲೀಸ್ ಕ್ವಾಟ್ರರ್ಸ್ ಅನ್ನು ಹೊಸ ಕಂಟೈನ್‌ಮೆಂಟ್ ಝೋನ್ ಗಳನ್ನಾಗಿ ಮಾಡಲಾಗಿದೆ. ಇಲ್ಲಿಯವರೆಗೆ 20 ಕಂಟೈನ್‌ಮೆಂಟ್ ವಲಯಗಳನ್ನಾಗಿ ಮಾಡಲಾಗಿದ್ದು, ಅದರಲ್ಲಿ 28 ದಿನಗಳವರೆಗೆ ಸೋಂಕು ಕಂಡು ಬಾರದ ಹಿನ್ನೆಲೆಯಲ್ಲಿ ನಾಲ್ಕು ವಲಯಗಳನ್ನು ಸೀಲ್ ಡೌನ್ ನಿಂದ ತೆಗೆಯಲಾಗಿದೆ. ಸದ್ಯಕ್ಕೆ 16 ವಲಯಗಳಲ್ಲಿ ಮಾತ್ರ ಸೀಲ್ ಡೌನ್ ಮಾಡಲಾಗಿದೆ ಎಂದು ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದರು.