ದಾವಣಗೆರೆ: ಕಲ್ಲು ಗಣಿ ಮತ್ತು ಕ್ರಷರ್ ಮಾಲೀಕರು ಕಾನೂನಿನ ಚೌಕಟ್ಟಿನೊಳಗೆ ತಮ್ಮ ಚಟುವಟಿಕೆಗಳನ್ನು ನಡೆಸಬೇಕು. ಕಾನೂನು ಮೀರಿ ನಡೆದರೆ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಕೆ ನೀಡಿದರು.
ಜಿಲ್ಲಾಡಳಿತ ಭವನದ ತುಂಗಭದ್ರ ಸಭಾಂಗಣದಲ್ಲಿ ಕಲ್ಲು ಗಣಿ ಸುರಕ್ಷತೆ ಮತ್ತು ಅನಧಿಕೃತ ಗಣಿಗಾರಿಕೆ ತಡೆ ಮಾಸಿಕ ಸಪ್ತಾಹದ ಅಂಗವಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ವತಿಯಿಂದ ಕಲ್ಲು ಗಣಿ ಮತ್ತು ಕ್ರಷರ್ ಮಾಲೀಕರಿಗೆ ಏರ್ಪಡಿಸಲಾಗಿದ್ದ ಸಭೆಯಲ್ಲಿ ಮಾತನಾಡಿದ ಅವರು, ಕಲ್ಲು ಗಣಿ ಮತ್ತು ಕ್ರಷರ್ಗಳಿಗೆ ಲೈಸನ್ಸ್ ನೀಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಮಾರ್ಗದರ್ಶನ ನೀಡುವರು. ಎಸ್‍ಪಿ ಹಾಗೂ ಡಿಸಿ ಕಚೇರಿಗಳ ಸಹಕಾರ ಕೂಡ ಇದ್ದು, ಆದಷ್ಟು ಬೇಗ ಮಾಲೀಕರು ಲೈಸನ್ಸ್ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು. ಅನಧಿಕೃತ ಕ್ವಾರಿಗಳ ಬಗ್ಗೆ ಪರಿಶೀಲಿಸಿ ವರದಿ ನೀಡಲು ತಂಡವೊಂದನ್ನು ರಚಿಸಿ, ಆ ವರದಿಯನ್ವಯ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.
ಜಿಲ್ಲೆಯಲ್ಲಿ ಒಟ್ಟು 58 ಕ್ರಷರ್ಗಳಿವೆ ಹಾಗೂ 78 ಕಲ್ಲು ಗಣಿಗಳಿವೆ. 78 ಕ್ವಾರಿಗಳ ಪೈಕಿ 10 ಮಾತ್ರ ಬ್ಲಾಸ್ಟಿಂಗ್ ಲೈಸನ್ಸ್ ಪಡೆದಿದ್ದು, 18 ಪ್ರಗತಿಯಲ್ಲಿವೆ. 7 ನವೀಕರಣ ಪ್ರಕ್ರಿಯೆಯಲ್ಲಿದ್ದರೆ, 7 ಮ್ಯಾನುವಲ್ ಮತ್ತು 36 ಕ್ವಾರಿಗಳಲ್ಲಿ ಕೆಲಸ ನಡೆಯುತ್ತಿಲ್ಲವೆಂದು ಗಣಿ ಇಲಾಖೆ ವರದಿ ನೀಡಿದೆ.