ದಾವಣಗೆರೆ: ಡಿ.09 ರ ಬಳಿಕ ಸಿಎಂ ಯಡಿಯೂರಪ್ಪ ನೇತೃತ್ವದ ಸರ್ಕಾರ ಅಲ್ಪಮತಕ್ಕೆ ಕುಸಿಯಲಿದೆ. ಆಗ ಪರ್ಯಾಯ ಮಾರ್ಗದತ್ತ ಆಲೋಚಿಸುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭವಿಷ್ಯ ನುಡಿದಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಮಹಾರಾಷ್ಟ್ರದಲ್ಲಿ ದೇವೇಂದ್ರ ಫಡ್ನವೀಸ್ ರಾಜೀನಾಮೆ ನೀಡಿದ ಹಾಗೆ ರಾಜ್ಯದಲ್ಲಿಯೂ ಯಡಿಯೂರಪ್ಪ ಅಧಿಕಾರದಿಂದ ಕೆಳಗಿಳಿಯಲಿದ್ದಾರೆ. ಉಪಚುನಾವಣೆಯಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಅಭಿಪ್ರಾಯಪಟ್ಟರು.
ಬಿಜೆಪಿಯವರು ಏನೂ ತಪ್ಪು ಮಾಡಿಲ್ಲ ಎನ್ನುವಂತೆ ಮಾತನಾಡುತ್ತಾರೆ. ಇಡೀ ದೇಶದಲ್ಲಿ ಇವರಂತಹ ಸತ್ಯವಂತರು ಇಲ್ಲ ಎನ್ನುವಂತೆ ಓಡಾಡುತ್ತಿದ್ದಾರೆ. ಬಿಜೆಪಿಯವರ ಆಡಿಯೋ, ವಿಡಿಯೋ ಎರಡನ್ನು ನೋಡಿದ್ದೇವೆ. ಇದು ಜನರಿಗೆ ಗೊತ್ತಿದೆ. ಬಿಜೆಪಿಗೆ ಅಧಿಕಾರ ಮುಖ್ಯ ಹೊರತು ರಾಜ್ಯದ ಅಭಿವೃದ್ಧಿ ಅಲ್ಲ ಎಂದು ಕಿಡಿಕಾರಿದರು.
ಜಾತಿ ಹೆಸರಲ್ಲಿ ಮತ ಕೇಳುತ್ತಿದ್ದಾರೆ. ರಾಜಕೀಯ ಪರಿಸ್ಥಿತಿ ಮುಂದೇನು ಆಗುತ್ತೆ ಎನ್ನುವುದು ಹೇಳೋಕೆ ಆಗೋಲ್ಲ. ಖಂಡಿತವಾಗಿ ಈ ಸರ್ಕಾರ ಬಿದ್ದೋಗುತ್ತದೆ. ಬಿಜೆಪಿ ಆಪರೇಷನ್ 2 ಮಾಡಲು ಹವಣಿಸುತ್ತಿದೆ. ಯಾವ ಮಾರ್ಗದಿಂದ ಆದರೂ ಸರಿಯೇ ಅಧಿಕಾರ ಹಿಡಿಯಬೇಕು ಎನ್ನುವುದು ಅವರ ಆಶಯವಾಗಿದೆ.
ಅವರೆಲ್ಲ ಅಡ್ವಾನ್ಸ್ ಶಾಸಕರು, ಅಡ್ವಾನ್ಸ್ ತೆಗೆದುಕೊಂಡು ಪಕ್ಷ ಬಿಟ್ಟಿದ್ದು...!
ಅನರ್ಹ ಶಾಸಕರನ್ನು ಅಡ್ವಾನ್ಸ್ ಶಾಸಕರು ಎಂದು ವ್ಯಂಗ್ಯವಾಡಿದ ದಿನೇಶ್ ಗುಂಡೂರಾವ್, ಸಿಎಂ ಪ್ರಚಾರದಲ್ಲಿ ಅನರ್ಹ ಶಾಸಕರನ್ನು ಮಂತ್ರಿ ಡಿಸಿಎಂ ಮಾಡುತ್ತೀವಿ. ಇದು ಚುನಾವಣೆಯ ಸಂದರ್ಭದಲ್ಲಿ ಈ ರೀತಿ ಹೇಳಬಾರದು. ಚುನಾವಣೆ ಆಯೋಗಕ್ಕೆ ದೂರು ನೀಡಿದ್ದೇವೆ. ಜಾತಿ ಹೆಸರಲ್ಲಿ ಮಂತ್ರಿ ಡಿಸಿಎಂ ಮಾಡ್ತೀವಿ ಎನ್ನುವ ಹೆಸರಲ್ಲಿ ಮತಗಳನ್ನು ಕೇಳುತ್ತಿದ್ದಾರೆ ಎಂದು ಹೇಳಿದರು.
ಹನಿಟ್ರ್ಯಾಪ್ನಲ್ಲಿ ಶಾಸಕರು ಸಿಲುಕಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿಯವರು ಅದರಲ್ಲಿ ನಿಸ್ಸೀಮರು. ರಾಜಕಾರಣದಲ್ಲಿ ಇಂಥದ್ದು ಆಗಬಾರದು. ತನಿಖೆ ನಡೆಯುತ್ತಿದೆ ನೋಡೋಣ ಎಂದಷ್ಟೇ ಹೇಳಿದರು.