ದಾವಣಗೆರೆ: ಸಮರ್ಪಕ ವಿದ್ಯುತ್ ಪೂರೈಸದ ಬೆಸ್ಕಾಂ ವಿರುದ್ಧ ರೈತರು ಆಕ್ರೋಶ ವ್ಯಕ್ತಪಡಿಸಿದ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ತಾವರಕೆರೆಯಲ್ಲಿ ನಡೆದಿದ್ದು, ಅಧಿಕಾರಿಗಳ ಜೊತೆ ರೈತರು ಮಾತಿನ ಚಕಮಕಿ ನಡೆಸಿದ್ದಾರೆ.
ಕೃಷಿಗೆ ರಾತ್ರಿ ವೇಳೆ ಸರಿಯಾಗಿ ವಿದ್ಯುತ್ ಪೂರೈಕೆ ಆಗುತ್ತಿಲ್ಲ. ರಾತ್ರಿ ವೇಳೆ ಕನಿಷ್ಠ 7 ಗಂಟೆಗಳ ಕಾಲ ಥ್ರೀ ಫೇಸ್ ವಿದ್ಯುತ್ ನೀಡಬೇಕು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಬೆಸ್ಕಾಂ ಕಚೇರಿಗೆ ಅಲೆದು-ಅಲೆದು ಸಾಕಾಗಿದೆಯೆಂದು ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ಧಿಕ್ಕಾರ ಕೂಗಿದರು.
ಬೆಸ್ಕಾಂ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅನ್ನದಾತರು ಇಂಥಹ ಧೋರಣೆ ಮುಂದುವರಿಸಿದರೆ ಸುಮ್ಮನಿರುವುದಿಲ್ಲ. ಸರಿಯಾಗಿ ವಿದ್ಯುತ್ ಪೂರೈಕೆ ಮಾಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.