ದಾವಣಗೆರೆ: ಯುವಕನೊಬ್ಬ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದು ಪ್ರಾಣಬಿಟ್ಟ ಹೃದಯವಿದ್ರಾವಕ ಘಟನೆ ನಗರದಲ್ಲಿ ನಡೆದಿದೆ.
ಎಸ್ಎಸ್ಎಂ ನಗರದ ಬಂದೆನವಾಜ್ ಲೇಔಟ್ನ 24 ವರ್ಷದ ಮೊಹಮ್ಮದ್ ನಿಯಾಜ್ ಮೃತಪಟ್ಟ ದುರ್ದೈವಿ. ತೀವ್ರ ಜ್ವರದಿಂದ ಅಸ್ವಸ್ಥಗೊಂಡಿದ್ದ ಈತನನ್ನು ನಗರದ ಸಿಟಿ ಸೆಂಟ್ರಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಎರಡು ದಿನಗಳ ಬಳಿಕ ಬೇರೆ ಆಸ್ಪತ್ರೆಗೆ ಹೋಗುವಂತೆ ಆಸ್ಪತ್ರೆಯ ವೈದ್ಯರು ಸೂಚಿಸಿದ್ದಾರೆ. ಬಳಿಕ ಚಿಗಟೇರಿ ಜಿಲ್ಲಾಸ್ಪತ್ರೆಗೆ ಕರೆತರಲಾಗಿತ್ತು. ಇಲ್ಲಿ ಕೊರೊನಾ ಸೋಂಕಿತರು ಹೆಚ್ಚಿರುವ ಕಾರಣ ಬೇರೆ ಆಸ್ಪತ್ರೆಗೆ ಹೋಗುವಂತೆ ವೈದ್ಯರು ಸೂಚಿಸಿದ್ದರು.
ಅದರಂತೆ ಯುವಕನ ಪೋಷಕರು ಎಸ್ಎಸ್ ಹೈಟೆಕ್ ಆಸ್ಪತ್ರೆಗೆ ಸೇರಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಯುವಕ ಸಾವನ್ನಪ್ಪಿದ್ದಾನೆ. ಈತನ ಗಂಟಲು ದ್ರವ ಪರೀಕ್ಷೆಯನ್ನು ನಡೆಸಲಾಗಿದ್ದು, ವರದಿ ನೆಗೆಟಿವ್ ಬಂದ ಕಾರಣ ಶವವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ.
ಸಿಟಿ ಸೆಂಟ್ರಲ್ ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ನೀಡಲಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಇಲ್ಲ ಎಂದು ಹೇಳಿ ಕಳುಹಿಸಿದರು. ಬದುಕಿ ಬಾಳಬೇಕಿದ್ದ 24 ವರ್ಷದ ನನ್ನ ಮಗ ಸಾವು ಕಂಡಿದ್ದಾನೆ. ಸೂಕ್ತ ಚಿಕಿತ್ಸೆ ನೀಡಿದ್ದರೆ ಬದುಕುತ್ತಿದ್ದನು. ಇಂತಹ ನಿರ್ಲಕ್ಷ್ಯ ಮಾಡಿದ್ದು ಸರಿಯಲ್ಲ. ನ್ಯಾಯ ಸಿಗುವವರೆಗೆ ನಾವು ಬಿಡುವುದಿಲ್ಲ. ಎಲ್ಲ ರೀತಿಯ ಹೋರಾಟ ನಡೆಸುತ್ತೇವೆ ಎಂದು ಮೃತನ ತಂದೆ ಮಹಮ್ಮದ್ ಶರೀಫ್ ಆಸ್ಪತ್ರೆ ಅಧಿಕಾರಿಗಳ ವಿರುದ್ಧ ಆಕ್ರೊಶ ಹೊರ ಹಾಕಿದ್ದಾರೆ.