ದಾವಣಗೆರೆ: ತವರು ಮನೆಯಿಂದ ಬಂದವರಿಗೆ ಆತಿಥ್ಯ ನೀಡಿದ್ದಕ್ಕೆ ಸೊಸೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ದಾವಣಗೆರೆಯ ವಿದ್ಯಾನಗರದಲ್ಲಿ ನಡೆದಿದೆ. ಹಲ್ಲೆಗೊಳಗಾದ ನೇತ್ರಾ ಎಂಬುವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಿವಮೊಗ್ಗ ಮೂಲದ ನೇತ್ರಾ ಕಳೆದ ಒಂದೂವರೆ ವರ್ಷದ ಹಿಂದೆ ದಾವಣಗೆರೆಯ ಸಾಫ್ಟ್‌ವೇರ್ ಇಂಜಿನಿಯರ್ ರೋಹಿತ್ನನ್ನು ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ವರದಕ್ಷಿಣೆ ನೀಡಿ ಅದ್ಧೂರಿಯಾಗಿ ವಿವಾಹ ಮಾಡಿಕೊಟ್ಟಿದ್ದರು. ಆದರೆ, ಕೆಲ ತಿಂಗಳುಗಳಿಂದ ರೋಹಿತ್ ತಂದೆ - ತಾಯಿ ನೇತ್ರಾಳಿಗೆ ಸಾಕಷ್ಟು ಕಿರುಕುಳ ನೀಡುತ್ತಿದ್ದರಂತೆ.
ನೇತ್ರಾ ತವರು ಮನೆಯವರು ಏನಾದರೂ ಬಂದರೆ ಪತಿ ರೋಹಿತ್ ಅವರ ತಂದೆ - ತಾಯಿ ಮಾತನಾಡಿಸದೇ, ಆತಿಥ್ಯ ನೀಡದೆ ಇರುತ್ತಿದ್ದರಂತೆ. ಇದರಿಂದ ಹಲವು ಬಾರಿ ಸಣ್ಣಪುಟ್ಟ ಜಗಳಗಳು ಕೂಡ ಆಗಿದ್ದವಂತೆ. ನಿನ್ನೆ ಕೂಡ ನೇತ್ರಾ ತಂದೆ - ತಾಯಿ ಬಂದಾಗ ಜಗಳವಾಗಿದ್ದು, ಇಂದು ಅದನ್ನು ಪ್ರಶ್ನಿಸಿದ್ದಕ್ಕೆ ಅತ್ತೆ, ಮಾವ ಹಾಗೂ ಗಂಡ ಸೇರಿ ಈಳಿಗೆ ಮಣೆಯಿಂದ ಮನಬಂದಂತೆ ಥಳಿಸಿ, ಮಾರಣಾಂತಿಕವಾದ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಈ ವೇಳೆ ನೇತ್ರಾ ಮನೆಯ ಹೊರಗಡೆ ಓಡಿ ಬಂದಿದ್ದಾರೆ. ನೇತ್ರಾಳನ್ನು ನೋಡಿದ ಸ್ಥಳೀಯರು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಸಣ್ಣಪುಟ್ಟ ವಿಚಾರಕ್ಕೆ ಜಗಳವಾಡಿ ಮಾರಣಾಂತಿಕ ಹಲ್ಲೆ ನಡೆಸುತ್ತಿದ್ದಾರೆ ಎಂದು ಹಲ್ಲೆಗೊಳಗಾದ ನೇತ್ರಾ ದೂರಿದ್ದಾರೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ನೇತ್ರಾ ಚಿಕಿತ್ಸೆ ಪಡೆಯುತ್ತಿದ್ದು, ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.