ದಾವಣಗೆರೆ: ಮನದಲ್ಲೇ ಸರ್ಕಾರದ ವಿರುದ್ಧ ಆಕ್ರೋಶ ಹುದುಗಿದ್ದರೂ ಕೊರೊನಾ ವಾರಿಯರ್ಸ್ ಮಹಾಮಾರಿ ವಿರುದ್ಧ ಹೋರಾಡುತ್ತಿದ್ದಾರೆ. ಆದರೆ, ಕಳೆದ 15 ತಿಂಗಳಿನಿಂದ ಶಿಷ್ಯವೇತನ ನಯಾಪೈಸೆಯೂ ಬಂದಿಲ್ಲ. ಆದ್ರೂ ಲಾಕ್‌ಡೌನ್ ಮುಗಿಯೋವರೆಗೆ ಕೊರೊನಾ ವಿರುದ್ಧದ ಹೋರಾಟದಲ್ಲಿ ತೊಡಗಿಸಿಕೊಳ್ತೇವೆ ಅಂತಾರೆ. ಬೇಡಿಕೆ ಈಡೇರಬಹುದು ಎಂದುಕೊಂಡ ಅವರಿಗೆ ಸಿಕ್ಕಿದ್ದು ಭರವಸೆ ಮಾತ್ರ.
ಇದು ದಾವಣಗೆರೆಯ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಕೆಲಸ ಮಾಡುತ್ತಿರುವ ವೈದ್ಯಕೀಯ ಸ್ನಾತಕೋತ್ತರ ಹಾಗೂ ಗೃಹ ವಿದ್ಯಾರ್ಥಿಗಳ ಕಥೆ. ಒಟ್ಟು 133 ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು, 77 ಗೃಹ ವಿದ್ಯಾರ್ಥಿಗಳು ಹಗಲು ರಾತ್ರಿ ಎನ್ನದೇ ಕೆಲಸ ಮಾಡ್ತಿದ್ದಾರೆ. ಇವರೆಲ್ಲಾ ದಾವಣಗೆರೆಯ ಜೆಜೆಎಂ ವೈದ್ಯಕೀಯ ಮಹಾವಿದ್ಯಾಲಯದ ವಿದ್ಯಾರ್ಥಿಗಳಾಗಿದ್ದು ಸರ್ಕಾರಿ ಸೀಟು ಪಡೆದು ಇಲ್ಲಿ ವಿದ್ಯಾಭ್ಯಾಸ ಮಾಡ್ತಿದ್ದಾರೆ. ಸ್ಟೈಫಂಡ್ ಬಾರದೇ ನಿತ್ಯವೂ ಪರದಾಡುತ್ತಿದ್ದಾರೆ. ಈ ಮಹಾವಿದ್ಯಾಲಯದಲ್ಲಿ ರೈತರು, ಕಂಡಕ್ಟರ್ ಸೇರಿ ಬಡವರ ಮಕ್ಕಳು ವ್ಯಾಸಾಂಗ ಮಾಡುತ್ತಿದ್ದಾರೆ.
ಲಾಕ್‌ಡೌನ್ ಹಿನ್ನೆಲೆಯಲ್ಲಿ ಮನೆಯಲ್ಲಿ ಹಣ ಕೇಳಲು ಸಾಧ್ಯವಾಗ್ತಿಲ್ಲ. ಇತ್ತ ಸರ್ಕಾರವಾಗಲಿ, ಕಾಲೇಜಿನ ಆಡಳಿತ ಮಂಡಳಿಯಾಗಲಿ ಕ್ರಮ ಕೈಗೊಳ್ಳುತ್ತಿಲ್ಲ. ಲಕ್ಷಗಟ್ಟಲೇ ಕಾಲೇಜು ಫೀಸ್ ಕಟ್ಟಲು ಲೋನ್ ಮಾಡಿ ಬ್ಯಾಂಕ್ನಲ್ಲಿ ಹಣ ಪಡೆದಿದ್ದೇವೆ. ಬಾಡಿಗೆ, ಊಟ, ವಾಹನಕ್ಕೆ ಪೆಟ್ರೋಲ್ ಸೇರಿ ಇತರೆ ಖರ್ಚಿಗೆ ಹಣ ಇಲ್ಲ. ಏನು ಮಾಡುವುದು ಅಂತಾನೇ ಗೊತ್ತಾಗಲ್ಲ ಅಂತಾರೆ ವಿದ್ಯಾರ್ಥಿಗಳು.
ಕಾಲೇಜಿನ ಆಡಳಿತ ಮಂಡಳಿ ಹಾಗೂ ಸರ್ಕಾರದ ನಡುವಿನ ಜಟಾಪಟಿಯೇ ಈ ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ. ಮಿನಿಸ್ಟರ್ ಬರ್ತಾರೆ, ಕೆಲಸ ಆಗುತ್ತೆ ಅಂದ್ಕೊಂಡಿದ್ದೆವು. ಆದರೆ, ಸುಳ್ಳಾಯ್ತು, ಶಿಷ್ಯವೇತನ ಬಾರದ ಬಗ್ಗೆ ಈಗಾಗಲೇ ಸಂಬಂಧಪಟ್ಟವರ ಗಮನಕ್ಕೆ ತರಲಾಗಿತ್ತು. ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ದಾವಣಗೆರೆಗೆ ಬರುತ್ತಾರೆ ಎಂಬ ಕಾರಣಕ್ಕೆ ತುಂಬಾ ಉತ್ಸುಹಕರಾಗಿದ್ದೆವು. ಕೆಲಸ ಆಗುತ್ತೆ ಅಂದುಕೊಂಡಿದ್ದೆವು. ಆದರೆ, ಅವ್ರಿಂದಲೂ ಸಿಕ್ಕಿದ್ದು ಅದೇ ಭರವಸೆ. ಕೊರೊನಾ ವಿರುದ್ಧ ಹೋರಾಡ್ತಿರುವ ನಮ್ಮ ಬಗ್ಗೆ ತಾತ್ಸಾರ ಸರಿಯಲ್ಲ ಎಂದು ವಿದ್ಯಾರ್ಥಿಗಳಯ 'ಈಟಿವಿ ಭಾರತ್'ಗೆ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸೇವೆಯಿಂದ ನಾವು ಹಿಂದೆ ಸರಿಯಲ್ಲ. ಎಷ್ಟೇ ಕಷ್ಟವಾದ್ರೂ ಕರ್ತವ್ಯ ನಿರ್ವಹಿಸ್ತೇವೆ. ಬೇಡಿಕೆ ಈಡೇರದಿದ್ದರೆ ಲಾಕ್‌ಡೌನ್ ಮುಗಿದ ಬಳಿಕ ಪ್ರತಿಭಟನೆ ನಡೆಸುತ್ತೇವೆ. ಮುಂದೆ ಏನು ಮಾಡಬೇಕು ಎಂದು ವಿದ್ಯಾರ್ಥಿಗಳೆಲ್ಲರೂ ಸೇರಿ ಒಟ್ಟಿಗೆ ಕುಳಿತು ನಿರ್ಧಾರಕ್ಕೆ ಬರುತ್ತೇವೆ ಎನ್ನುತ್ತಾರೆ ಡಾ. ಹಿತಾ.