ದಾವಣಗೆರೆ: ಕೆರೆಯ ತುಂಬೆಲ್ಲಾ ಮುಳ್ಳಿನ ಗಿಡಗಳು ಬೆಳೆದಿದ್ದು, ಅದರಲ್ಲಿ ಕೆಲಸ ಮಾಡಲು ಕಾರ್ಮಿಕರು ಹರಸಾಹಸ ಪಡಬೇಕು. ಇದು ನಿಮಗೆ ಗೊತ್ತಾಗುವುದಿಲ್ಲವಾ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲೆಯ ನ್ಯಾಮತಿ ತಾಲೂಕಿನ ಕೆಚ್ಚಿಕೊಪ್ಪ ಗ್ರಾಮದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿದ ಬಳಿಕ ಮಾತನಾಡಿದ ಅವರು, ಕೂಲಿ ಕಾರ್ಮಿಕರು ನಮ್ಮಂತೆ ಮನುಷ್ಯರು. ಲಾಕ್‌ಡೌನ್‌ನಿಂದಾಗಿ ದುಡಿಯುವ ಕೈಗಳಿಗೆ ಕೆಲಸ ಇಲ್ಲದಂತಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡಲಾಗಿದೆ. ಅವರ ಸುರಕ್ಷತಾ ಕ್ರಮಗಳ ಬಗ್ಗೆ ಎಚ್ಚರವಹಿಸಬೇಕು. ಮೊದಲು ಜೆಸಿಬಿ ಬಳಸಿ ಕೂಡಲೇ ಮುಳ್ಳಿನ ಗಿಡಗಳನ್ನು ತೆರೆವು ಮಾಡಿ. ಆನಂತರ ಕೂಲಿ ಕಾರ್ಮಿಕರಿಗೆ ಕೆಲಸ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸುಮಾರು 20 ಲಕ್ಷ ರೂಪಾಯಿ ವೆಚ್ಚದ ಕೆರೆ ಹೂಳೆತ್ತುವ ಯೋಜನೆಗೆ ಚಾಲನೆ ನೀಡಿದ್ದು, ಹಾಲಿ 80 ಕೂಲಿ ಕಾರ್ಮಿಕರು ಯೋಜನೆಯ ಸದುಪಯೋಗ ಪಡೆಯುತ್ತಿದ್ದಾರೆ. 25 ಎಕರೆ ವಿಸ್ತೀರ್ಣದ ಕೆರೆ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ 249 ರೂ. ದಿನಗೂಲಿಯನ್ನು 275 ರೂಪಾಯಿಗೆ ಹೆಚ್ಚಿಸಿದ್ದಾರೆ. ದುಡಿಯುವ ಕೈಗಳಿಗೆ ಬಲ ತುಂಬಿದ್ದಾರೆ. ಸಂಕಷ್ಟದಲ್ಲಿರುವ ಜನರಿಗೆ ಅನೇಕ ಉಚಿತ ಯೋಜನೆಗಳನ್ನು ನೀಡಿದ್ದು, ಸರ್ಕಾರ ಜನಪರ ಕೆಲಸ ಮಾಡುತ್ತಿದೆ ಎಂದು ಹೇಳಿದರು.