ದಾವಣಗೆರೆ: ದಾವಣಗೆರೆ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ. ಜಿಲ್ಲೆಯ ನಾಲ್ವರು ವಿದ್ಯಾರ್ಥಿನಿಯರು 625 ಕ್ಕೆ 625 ರಷ್ಟು ಅಂಕ ಪಡೆದು ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಟಾಪರ್ ಆಗಿ ಹೊರಹೊಮ್ಮುವ ಮೂಲಕ ತಮ್ಮ ಶಾಲೆಯ ಕೀರ್ತಿ ಪತಾಕೆಯನ್ನು ರಾಜ್ಯಾದ್ಯಂತ ಪಸರಿಸಿದ್ದಾರೆ.
ಜಿಲ್ಲೆಯ ಸಿದ್ದಗಂಗಾ ಶಾಲೆಯ ಅನುಷಾ ಗ್ರೇಸ್ ಡಿ ಚಿಂದವಾಳ್ ಹಾಗೂ ವಿಜೇತಾ ಬಸವರಾಜ್ ಎಂಬ ಇಬ್ಬರು ಬಾಲಕಿಯರು, ತರಳಬಾಳು ಸಂಸ್ಥೆಯ ಅನುಭವ ಮಂಟಪ ಶಾಲೆಯ ವಿದ್ಯಾರ್ಥಿನಿ ಮನೀಷಾ ಎಂಎಂ ಹಾಗೂ ದಾವಣಗೆರೆ ಜಿಲ್ಲೆಯ ಹರಿಹರದ ರಕ್ಷಿತಾ ಪಾಟೀಲ್ ಈ ನಾಲ್ವರು ವಿದ್ಯಾರ್ಥಿನಿಯರು ಇಡೀ ಜಿಲ್ಲೆಯ ಫಲಿತಾಂಶದಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ.
ಸಿದ್ದಗಂಗಾ ಶಾಲೆಯ ಮುಖ್ಯ ಶಿಕ್ಷಕಿ ಡಾ. ಜಸ್ಟಿನ್ ಡಿ'ಸೋಜಾ ಅವರು ರ‍್ಯಾಂಕ್ ಬಂದ ಅನುಷಾ ಗ್ರೇಸ್ ಡಿ ಚಿಂದವಾಳ್ ಹಾಗೂ ವಿಜೇತಾ ಬಸವರಾಜ್ ಇಬ್ಬರಿಗೂ ಸಿಹಿ ತಿನ್ನಿಸುವ ಮೂಲಕ ಹೂ ಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದರು.
ಕೊರೊನಾ ಹೆಚ್ಚಾಗಿದ್ದರಿಂದ ಸರ್ಕಾರ ಎಸ್ಎಸ್ಎಲ್ಸಿ ಪರೀಕ್ಷೆಯನ್ನು ಎರಡೇ ದಿನದಲ್ಲಿ ಮುಗಿಸಿತ್ತು. ಒಂದು ದಿನಕ್ಕೆ ಮೂರು ವಿಷಯಗಳ ಪರೀಕ್ಷೆ ಬರೆಯಲಾಗಿತ್ತು. ಒಂದು ದಿನದಲ್ಲಿ ಮೂರು ವಿಷಯಕ್ಕೆ ಪರೀಕ್ಷೆ ಬರೆಯುವುದು ಕಷ್ಟಸಾಧ್ಯವಾಗಿತ್ತು, ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಶಾಲೆ ಹಾಗೂ ಶಿಕ್ಷಕಿಯರು ಮನೋಸ್ಥೈರ್ಯ ತುಂಬುವ ಮೂಲಕ ನಮಗೆ ಸಾಥ್ ನೀಡಿದರು ಎಂದು ಸಿದ್ದಗಂಗಾ ಶಾಲೆಯ ವಿದ್ಯಾರ್ಥಿಗಳು ಶಿಕ್ಷಕಿಯರಿಗೆ ಹಾಗೂ ಆಡಳಿತ ಮಂಡಳಿಗೆ ಕೃತಜ್ಞತೆ ಸಲ್ಲಿಸಿದರು.