ದಾವಣಗೆರೆ : ಅನಾವಶ್ಯಕವಾಗಿ ಓಡಾಡುವ ವಾಹನಗಳ ಜಪ್ತಿ ಮಾಡುತ್ತೇವೆ. ಈ ವಿಚಾರದಲ್ಲಿ ನಿರ್ದಾಕ್ಷಿಣ್ಯ ಕ್ರಮಕೈಗೊಳ್ಳುತ್ತೇವೆ. ಕುಂಟುನೆಪ ಮಾಡಿಕೊಂಡು ರೋಡಿಗಿಳಿದರೆ ಸಹಿಸುವುದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಕೆ ನೀಡಿದ್ದಾರೆ.
ಬಡಾವಣೆ ಠಾಣೆಯಲ್ಲಿ ಮಾತನಾಡಿದ ಅವರು, ಈಗಾಗಲೇ ಹರಪನಹಳ್ಳಿಯಲ್ಲಿ 50ಕ್ಕೂ ಹೆಚ್ಚು ವಾಹನಳನ್ನು ಸೀಜ್ ಮಾಡಿದ್ದೇವೆ. ತುರ್ತು ಕೆಲಸ ಇದ್ದರೆ ಮಾತ್ರ ರಸ್ತೆಗಿಳಿಯಿರಿ. ಕಾರಿನಲ್ಲಿ ಮನೆ ಮಂದಿಯೆಲ್ಲಾ ಬಂದು ತರಕಾರಿ ಸೇರಿ ಇತರೆ ವಸ್ತುಗಳ ಖರೀದಿ ಮಾಡುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ಮನೆಯಿಂದ ಯಾರಾದರೂ ಒಬ್ಬರು ಬಂದರೆ ಸಾಕು. ಪೆಟ್ರೋಲ್ ಬಂಕ್ ಮಾಲೀಕರು ಸಹ ತುರ್ತು ಸೇವೆಯವರಿಗೆ ಮಾತ್ರ ಇಂಧನ ಪೂರೈಸಬೇಕು ಎಂದು ಸೂಚನೆ ನೀಡಿದರು.
ಕದ್ದು ಮುಚ್ಚಿ ‘ಎಣ್ಣೆ’ ವ್ಯಾಪಾರ, ಪೊಲೀಸರ ದಾಳಿ : ನಗರದ ಭವಾನಿ ಲಿಕ್ಕರ್ ಶಾಪ್‌ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಲಾಗುತ್ತಿದ್ದರ ಖಚಿತ ಮಾಹಿತಿ ಪಡೆದು ಪೊಲೀಸರು ದಾಳಿ ನಡೆಸಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ. ದಾಳಿ ವೇಳೆ ಮೂರುವರೆ ಲಕ್ಷ ರೂಪಾಯಿ ಮೌಲ್ಯದ 74 ಬಾಕ್ಸ್ ಮದ್ಯ, 689 ಲೀಟರ್ ವಿಸ್ಕಿ ಸೇರಿ ಇತರೆ ಮದ್ಯದ ಬಾಟಲ್‌ಗಳನ್ನ ವಶ ಪಡಿಸಿಕೊಳ್ಳಲಾಗಿದೆ. ಚನ್ನಗಿರಿ ತಾಲೂಕಿನ ನಲ್ಲೂರು, ಭೈರನಹಳ್ಳಿಯಲ್ಲಿಯೂ ದಾಳಿ ನಡೆಸಿ 15 ಬಾಕ್ಸ್ ಮದ್ಯ ಹಾಗೂ ಇತರೆ ಲಿಕ್ಕರ್ ಜಪ್ತಿ ಮಾಡಲಾಗಿದೆ. ಆರೋಪಿಗಳನ್ನು ಶೀಘ್ರವೇ ಪತ್ತೆ ಹಚ್ಚಲಾಗುವುದು ಎಂದರು.
ಚನ್ನಗಿರಿಯಲ್ಲಿ ರಸ್ತೆಯಲ್ಲಿ ಓಡಾಡುವ ಸಾರ್ವಜನಿಕರು ಹಾಗೂ ವಾಹನ ಸವಾರರಿಗೆ ಬೆದರಿಕೆ ಹಾಕುತ್ತಿದ್ದ ಇಬ್ಬರನ್ನು ಬಂಧಿಸಲಾಗಿದೆ. ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಉಳಿದ ಆರೋಪಿಗಳನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಎಸ್ಪಿ ಹನುಮಂತರಾಯ ಹೇಳಿದರು.