ದಾವಣಗೆರೆ: ನಗರದ ಪೀಸಾಳೆ ಕಾಂಪೌಂಡ್ನಲ್ಲಿ ಮಹಡಿ ಮೇಲಿಂದ ಬಿದ್ದು ಬಾಲಕನ ಆತ್ಮಹತ್ಯೆ ಪ್ರಕರಣದಲ್ಲಿ ಇನ್ನಷ್ಟು ಮಾಹಿತಿ ಲಭ್ಯವಾಗಿದೆ. ಆನ್ಲೈನ್ ಗೇಮ್ ಮಾದರಿಯ ಅನಿಮೇಷನ್ ವಿಡಿಯೋ ನೋಡಿ ಪಿಯುಸಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿದ್ದಾನೆಂದು ಎಸ್ಪಿ ಸಿ.ಬಿ ರಿಷ್ಯಂತ್ ಮಾಹಿತಿ ನೀಡಿದ್ದಾರೆ.
ಗೂಗಲ್ ಸರ್ಚ್ ಮಾಡಿದ್ದ ಬಾಲಕ: ಆತ್ಮಹತ್ಯೆಗೂ ಮುನ್ನ ಬಾಲಕ ಗೂಗಲ್ನಲ್ಲಿ ಬ್ಲೂವೇಲ್ ಗೇಮ್ ಮಾದರಿಯ ಅನಿಮೇಷನ್ ವಿಡಿಯೋ ಹುಡುಕಿದ್ದಾನೆ. ಬಳಿಕ ವಿಡಿಯೋ ನೋಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಬಗ್ಗೆ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಹೇಳಿದ್ದಾರೆ.
ಏಪ್ರಿಲ್ 23ರಂದು ದಾವಣಗೆರೆ ನಗರದ ಪೀಸಾಳೆ ಕಾಂಪೌಂಡ್ನಲ್ಲಿನ ಮನೆಯೊಂದರ ಮಹಡಿ ಮೇಲಿಂದ ಬಿದ್ದು ಬಾಲಕ ಸಾವನ್ನಪ್ಪಿದ್ದ ಪ್ರಕರಣ ಸಾಕಷ್ಟು ಅನುಮಾನ ಮೂಡಿಸಿತ್ತು. ಬಾಲಕ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ಕಂಡು ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿತ್ತು. ದ್ವಿತೀಯ ಪಿಯುಸಿ ಓದುತ್ತಿದ್ದ ಬಾಲಕ ಮೊದಲು ಕೈ ಕೊಯ್ದುಕೊಂಡಿದ್ದು, ಕೆಲಹೊತ್ತು ರಕ್ತಸ್ರಾವವಾಗಿದೆ. ಬಳಿಕ ವಿಡಿಯೋ ನೋಡಿಕೊಂಡು ಎರಡನೇ ಮಹಡಿಯಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ಸಾವಿಗೆ ತಾನೇ ಕಾರಣ ಎಂದು ಪತ್ರ: ವಿದ್ಯಾರ್ಥಿ ತನ್ನ ಸಾವಿಗೆ ತಾನೇ ಕಾರಣ ಎಂದು ಪತ್ರ ಬರೆದು ಅತ್ಮಹತ್ಯೆ ಮಾಡಿಕೊಂಡಿದ್ದ. ಡೆತ್ ನೋಟ್ನಲ್ಲಿನ ಕೈಬರಹವು ಆತನದೇ ಎಂದು ತಂದೆ ತಿಳಿಸಿದ್ದಾರೆ. ಆದರೂ ಕೂಡ ತನಿಖೆ ಹಿನ್ನೆಲೆಯಲ್ಲಿ ಹ್ಯಾಂಡ್ ರೈಟಿಂಗ್ ಎಕ್ಸ್ಪರ್ಟ್ಗಳಿಗೆ ಕಳುಹಿಸಲಾಗಿದೆ. ಅತ್ಮಹತ್ಯೆ ಮಾಡಿಕೊಂಡ ದಿನವೇ ಆತ ದ್ವಿತೀಯ ಪಿಯುಸಿ ಗಣಿತ ಪರೀಕ್ಷೆ ಬರೆಯಬೇಕಿತ್ತು. ಪ್ರಕರಣ ಸಂಬಂಧ ಇನ್ನೂ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಸಿ ಬಿ ರಿಷ್ಯಂತ ತಿಳಿಸಿದರು.
ಇದನ್ನೂ ಓದಿ: ಅಷ್ಟು ಹಣ ಎಲ್ಲಿಂದ ತರೋಕಾಗುತ್ತೆ?: ಪಿಎಸ್ಐ ಮಹಿಳಾ ವಿಭಾಗದಲ್ಲಿ ಮೊದಲ ಸ್ಥಾನ ಪಡೆದ ರಚನಾ ಕುಟುಂಬಸ್ಥರ ಅಳಲು!