ದಾವಣಗೆರೆ: ಅಪರಾಧ ಪ್ರಕರಣಗಳನ್ನು ಭೇದಿಸಲು ಪೊಲೀಸ್ ಇಲಾಖೆ ಡಾಗ್ ಸ್ಕ್ವಾಡ್ ಅನ್ನು ಬಳಸಿಕೊಳ್ಳುತ್ತದೆ. ಪೊಲೀಸ್ ಶ್ವಾನಗಳು ಸಹ ಅಷ್ಟೇ ನಿಷ್ಠೆಯಿಂದ ಆರೋಪಿಗಳನ್ನು ಪತ್ತೆಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಆದ್ರೆ ಒಂದೇ ವರ್ಷದಲ್ಲಿ ಮೂರು ಶ್ವಾನಗಳು ಸಾವನ್ನಪ್ಪಿರುವುದು ಇಲಾಖೆಗೆ ತುಂಬಲಾರದ ನಷ್ಟವಾಗಿದೆ.
ತುಂಗಾ, ಪೂಜಾ ಎಂಬ ಎರಡು ಲೇಡಿ ಸಿಂಗಂಗಳು ಕ್ರಿಮಿನಲ್ಗಳನ್ನು ಹೆಡೆಮುರಿ ಕಟ್ಟಲು ಪೊಲೀಸರಿಗೆ ಸಹಕಾರಿಯಾಗಿದ್ದವು. ಈ ಎರಡು ಶ್ವಾನಗಳು ಸಾವನಪ್ಪಿದ ಬಳಿಕ ಇದೀಗ ಸ್ಫೋಟಕ ಪತ್ತೆ ವಿಭಾಗದಲ್ಲಿದ್ದ ಸೌಮ್ಯ ಎಂಬ ಶ್ವಾನ ಕೂಡ ಅಕಾಲಿಕವಾಗಿ ಸಾವನ್ನಪ್ಪಿದ್ದು, ಪೊಲೀಸ್ ಇಲಾಖೆ ಕಂಬನಿ ಮಿಡಿದಿದೆ.
ದಾವಣಗೆರೆ ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ಭೇದಿಸುವಲ್ಲಿ ಶ್ವಾನಗಳದ್ದೇ ಮೇಲುಗೈ. ಅಧಿಕಾರಿಗಳೊಂದಿಗೆ ಜೊತೆಯಾಗಿ ಶ್ವಾನಗಳು ದೊಡ್ಡ ಮಟ್ಟದ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿ ಇಡೀ ರಾಜ್ಯದಲ್ಲಿ ಖ್ಯಾತಿ ಗಳಿಸಿದ್ದವು. ದಾವಣಗೆರೆ ಜಿಲ್ಲೆಯ ಕಳ್ಳಕಾಕರಿಗೆ, ಕೊಲೆ ಆರೋಪಿಗಳಿಗೆ ಸಿಂಹಸ್ವಪ್ನವಾಗಿದ್ದ ಲೇಡಿ ಸಿಂಗಮ್ ತುಂಗಾ ಹಾಗೂ ಪೂಜಾ ನಿಷ್ಠೆಯಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಿವೆ. ಈ ಎರಡು ಶ್ವಾನಗಳು ಕ್ಲಿಷ್ಟಕರವಾದ ಪ್ರಕರಣಗಳನ್ನು ಭೇದಿಸಿ ಇಡೀ ರಾಜ್ಯದಲ್ಲಿ ಖ್ಯಾತಿ ಗಳಿಸಿ ಅಕಾಲಿಕವಾಗಿ ಸಾವನಪ್ಪಿದ್ದವು. ಇದೀಗ ಸೌಮ್ಯ ಹೆಸರಿನ ಶ್ವಾನ ಕೂಡ ಸಾವಿಗೀಡಾಗಿರುವುದು ಪೊಲೀಸ್ ಇಲಾಖೆಗೆ ಆಘಾತವಾಗಿದೆ.
ಸ್ಫೋಟಕ ಪತ್ತೆ ವಿಭಾಗದಲ್ಲಿ ಸೌಮ್ಯ ಸ್ವಭಾವದ ಶ್ವಾನ ಕಾರ್ಯನಿರ್ವಹಿಸಿದ್ದು, ಸ್ಪಿನೋ ಮೆಗಲಿನ್ (ಗುಲ್ಮ) ಎಂಬ ರೋಗಕ್ಕೆ ತುತ್ತಾಗಿ ಅಸುನೀಗಿದೆ. ಅಕಾಲಿಕವಾಗಿ ಅಸುನೀಗಿದ ಸೌಮ್ಯಳಿಗೆ ಇಡೀ ಪೊಲೀಸ್ ಇಲಾಖೆ ಗೌರವ ವಂದನೆ ಸಲ್ಲಿಸಿದೆ. ಈ ವೇಳೆ ಎಸ್ಪಿ ಉಮಾ ಪ್ರಶಾಂತ್ ಅವರು ಪ್ರತಿಕ್ರಿಯಿಸಿ, "ಸೌಮ್ಯ ಶ್ವಾನ ಎರಡು ವಾರದಿಂದ ಅನಾರೋಗ್ಯದಿಂದ ಬಳಲುತ್ತಿತ್ತು. ಇಂದು ಸಾವನ್ನಪ್ಪಿದೆ. 225ಕ್ಕೂ ಹೆಚ್ಚು ವಿವಿಐಪಿ, ವಿಐಪಿ ಬಂದೋಬಸ್ತ್ ಕೆಲಸದಲ್ಲಿ ಭಾಗಿಯಾಗಿತ್ತು. ನಾಲ್ಕು ಸ್ಫೋಟಕ ಪ್ರಕರಣದಲ್ಲಿ ಕಾರ್ಯ ನಿರ್ವಹಿಸಿತ್ತು. ಎರಡು ಸ್ಫೋಟಕ ಪ್ರಕರಣಗಳನ್ನು ಭೇದಿಸಿತ್ತು. ಅದರ ಆತ್ಮಕ್ಕೆ ಶಾಂತಿ ಸಿಗಲಿ" ಎಂದು ತಿಳಿಸಿದರು.
ತುಂಗಾ ಹೆಸರಿನ ಶ್ವಾನ 2022ರ ಆಗಸ್ಟ್ 26ರಂದು ಅಕಾಲಿಕವಾಗಿ ಕೊನೆಯುಸಿರೆಳೆದರೆ, 2022ರ ಸೆಪ್ಟೆಂಬರ್ 22ರಂದು ಪೂಜಾ ಶ್ವಾನ ಸಾವನ್ನಪ್ಪಿತ್ತು. ಇಂದು ಅಸುನೀಗಿರುವ ಸೌಮ್ಯ ಶ್ವಾನ ಲ್ಯಾಬ್ರಡಾರ್ ಜಾತಿಗೆ ಸೇರಿದ್ದು, 2018ರ ಜೂನ್ 8 ರಂದು ಜನಿಸಿತ್ತು. 2019ರ ಏಪ್ರಿಲ್ 4ರಂದು ಬೆಂಗಳೂರಿನ ತರಬೇತಿ ಶಾಲೆಯಲ್ಲಿ ತರಬೇತಿ ಮುಗಿಸಿತ್ತು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಜಿ20 ಸಭೆಗಳಲ್ಲಿ, ಪ್ರಧಾನಿ, ರಾಜ್ಯಪಾಲರು, ಸಿಎಂ ಕಾರ್ಯಕ್ರಮಗಳಲ್ಲಿ ಕಾರ್ಯನಿರ್ವಹಿಸುವ ಮೂಲಕ ಹೆಸರು ಗಳಿಸಿದೆ.
ಇದನ್ನೂ ಓದಿ: ಪ್ರತ್ಯೇಕ ಘಟನೆ: ಕಾಡಾನೆ ಮತ್ತು ಕಾಡು ಹಂದಿ ದಾಳಿಯಿಂದ ಇಬ್ಬರು ಆಸ್ಪತ್ರೆಗೆ ದಾಖಲು
ಸೌಮ್ಯ ಶ್ವಾನದ ಹ್ಯಾಂಡ್ಲರ್ ಹೇಳಿದ್ದು ಹೀಗೆ.. ಸಾವನ್ನಪ್ಪಿದ ಸೌಮ್ಯ ಶ್ವಾನದ ಹ್ಯಾಂಡ್ಲರ್ ಆಗಿರುವ ರೇವಣ ಸಿದ್ದಪ್ಪ ಅವರು ಪ್ರತಿಕ್ರಿಯಿಸಿ, "ನಾನು 2019ರಿಂದ ಈ ಶ್ವಾನದೊಂದಿಗೆ ಕರ್ತವ್ಯ ನಿರ್ವಹಿಸಿದ್ದೇನೆ. ಇದು ಸೌಮ್ಯ ಸ್ವಭಾವದ ಶ್ವಾನವಾಗಿತ್ತು. 225 ವಿವಿಐಪಿ/ವಿಐಪಿ ಭದ್ರತೆಗಳಲ್ಲಿ ಶ್ವಾನ ಹಾಜರಾಗಿದೆ. 4 ಸ್ಫೋಟಕ ಪತ್ತೆ ಪ್ರಕರಣಗಳಲ್ಲಿ ಈ ಶ್ವಾನ ಹಾಜರಾಗಿದ್ದು, ಆ ಪೈಕಿ 2 ಸ್ಫೋಟಕ ಪ್ರಕರಣಗಳನ್ನು ಶ್ವಾನ ಭೇದಿಸಿದೆ. ಚನ್ನಗಿರಿ ತಾಲೂಕಿನ ಕಾಶಿಪುರ ಗ್ರಾಮದಲ್ಲಿ ಸ್ಫೋಟಕ ಪತ್ತೆ ಹಚ್ಚಿತ್ತು. ಹರಿಹರ ತಾಲೂಕಿನ ಕೊಂಡಜ್ಜಿ ಗ್ರಾಮದ ಬಳಿ ಜಿಲೆಟಿನ್ ಪತ್ತೆಹಚ್ಚಿತ್ತು. ಹಲವು ಚುನಾವಣೆಗಳಲ್ಲಿ ಈ ಶ್ವಾನ ಕರ್ತವ್ಯ ನಿರ್ವಹಿಸಿತ್ತು. ಆದ್ರೀಗ ಸೌಮ್ಯ ಶ್ವಾನ ಅಸುನೀಗಿದ್ದು ಬಹಳ ನೋವಾಗಿದೆ'' ಎಂದು ಕಂಬನಿ ಮಿಡಿದರು.