ದಾವಣಗೆರೆ: ವಿದ್ಯಾರ್ಥಿಯೋರ್ವ ತನಗಿರುವ ಅಂಗವೈಕಲ್ಯ ಮೆಟ್ಟಿನಿಂತು ದ್ವಿತೀಯ ಪಿಯುಸಿಯಲ್ಲಿ ಪೋಷಕರು, ಕಾಲೇಜಿನ ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲ ಹೆಮ್ಮೆ ಪಡುವಂತಹ ಸಾಧನೆ ಮಾಡಿದ್ದಾನೆ.
ದಾವಣಗೆರೆಯ ಜಿ.ಎಂ. ಹಾಲಮ್ಮ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ಮನೋಜ್ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಶೇ. 90ರಷ್ಟು ಅಂಕ ಪಡೆದಿದ್ದಾನೆ. ಈತ ಜಿಲ್ಲೆಯ ದ್ಯಾಮವ್ವನ ಹಳ್ಳಿಯ ನಿವಾಸಿಗಳಾದ ಲಿಂಗರಾಜ್, ಲತಾ ಎನ್ನುವವರ ಮಗ. ಈತ ಹುಟ್ಟಿನಿಂದಲೂ ಎರಡೂ ಕೈ ಹಾಗೂ ಒಂದು ಕಾಲು ಸ್ವಾಧೀನವಿಲ್ಲದೇ ಓಡಾಡುವುದಕ್ಕೂ ಕಷ್ಟ ಪಡುತ್ತಿದ್ದ. ಆದರೆ ಕಷ್ಟಪಟ್ಟು ಓದಿ ಶೇ. 90ರಷ್ಟು ಅಂಕ ಪಡೆದು ಸಾಮಾನ್ಯ ವಿದ್ಯಾರ್ಥಿಗಳೂ ತಲೆ ತಗ್ಗಿಸುವಂತೆ ಮಾಡಿದ್ದಾನೆ. IITಯ ಜಾಯಿಂಟ್ ಎಂಟ್ರೆನ್ಸ್ ಎಕ್ಸಾಂನಲ್ಲಿ 1164ನೇ ಸ್ಥಾನ ಪಡೆದುಕೊಂಡಿದ್ದಾನೆ. ಮುಂದೇ ಚನ್ನಾಗಿ ಓದಿ IIT ಯಲ್ಲಿ ಪದವಿ ಪಡೆಯಬೇಕು ಎನ್ನುವುದು ಈತನ ಆಸೆಯಾಗಿದೆ.
ಮನೋಜ್ ಓದಿನ ಮೇಲೆ ತೋರಿದ ಶ್ರದ್ಧೆ, ಆಸಕ್ತಿ, ಕಲಿಯಬೇಕು ಎನ್ನುವ ಹಠ ಶಿಕ್ಷಕರನ್ನೇ ಬೆರಗುಗೊಳಿಸಿದೆ. ಎಲ್ಲ ಅನುಕೂಲವಿರುವವರೇ ಓದುವುದು, ತರಗತಿಗಳಿಗೆ ಹೋಗುವುದೇ ಕಡಿಮೆ. ಅಂತದ್ದರಲ್ಲಿ ಅಂಗವೈಕಲ್ಯದ ನಡುವೆಯೂ ಮನೋಜ್ ಯಾವುದೇ ಕ್ಲಾಸ್ ಮಿಸ್ ಮಾಡಿಲ್ಲ. ಪ್ರತಿನಿತ್ಯ ಆರು ಗಂಟೆಗಳ ಕಾಲ ಓದಿನಲ್ಲಿ ಮಗ್ನನಾಗುತ್ತಿದ್ದ ಈತನ ಸಾಧನೆ ಅದೆಷ್ಟೋ ವಿಕಲಚೇತನ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿದೆ ಎಂದು ಶಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೀಗೆ ಅಂಗವೈಕಲ್ಯ ಇದ್ದರೂ ಕೂಡ ಮನೋಜ್ ಎಲ್ಲರೂ ಮೆಚ್ಚುವಂತಹ ಸಾಧನೆ ಮಾಡಿದ್ದಾನೆ. ಮನೋಜ್ನ ಆತ್ಮಸ್ಥೈರ್ಯ ಹಾಗೂ ಛಲ ನೂರಾರು ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿದೆ.