ದಾವಣಗೆರೆ: ನಗರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಜಾಗ ಗುರುತಿಸುವ ಕಾರ್ಯ ಬಹಳ ಕಾಲದಿಂದ ನನೆಗುದಿಗೆ ಬಿದ್ದಿದ್ದು, ಜಿಲ್ಲಾಧಿಕಾರಿಗಳ ಮೂಲಕ ಟ್ರಕ್ ಟರ್ಮಿನಲ್‍ನ ಮ್ಯಾನೇಜಿಂಗ್ ಡೈರೆಕ್ಟರ್ ಸ್ಥಳ ಪರಿಶೀಲಿಸುವಂತೆ ಪತ್ರ ಬರೆಯಬೇಕೆಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಸೈಯದ್ ಸೈಫುಲ್ಲಾ ಒತ್ತಾಯಿಸಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್ ಅಧ್ಯಕ್ಷತೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಸುಮಾರು 25 ವರ್ಷಗಳ ಯೋಜನೆ ಇದಾಗಿದ್ದು ಹಲವಾರು ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ್ದರೂ ಟ್ರಕ್ ಟರ್ಮಿನಲ್ ವಿಷಯ ಇನ್ನೂ ನನೆಗುದಿಗೆ ಬಿದ್ದಿದೆ. ಇಂದೇ ಸರ್ಕಾರಕ್ಕೆ ಟ್ರಕ್ ಟರ್ಮಿನಲ್ ಜಾಗ ಗುರುತಿಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಆಗ್ರಹಿಸಿದರು.
ಆರ್ಟಿಒ ಎನ್.ಜೆ.ಬಣಕಾರ್ ಮಾತನಾಡಿ ಹಿಂದಿನ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ನಡಾವಳಿಯಲ್ಲಿನ ಆದೇಶದಂತೆ ಟ್ರಕ್ ಟರ್ಮಿನಲ್ ಜಾಗ ಗುರುತಿಸುವ ನಿಟ್ಟಿನಲ್ಲಿ ದಾವಣಗೆರೆ ತಾಲೂಕಿನ ಹಳೇ ಬಾತಿ ಗ್ರಾಮದ ಸರ್ವೇ ನಂ 83/03 ರ 5.8 ಎಕರೆ ಜಾಗವನ್ನು ಫೆ 6 ರಂದು ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಆರ್ಟಿಒ ತಹಶೀಲ್ದಾರ್ ಮತ್ತು ತಮ್ಮ ಸಮ್ಮುಖದಲ್ಲಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಲಾಗಿತ್ತು. ಈ ವಿಷಯ ಕುರಿತಂತೆ ದಾವಣಗೆರೆ ತಹಶೀಲ್ದಾರ್ ಕೂಡಲೇ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿಗೆ ವರದಿ ಸಲ್ಲಿಸುವಂತೆ ಪತ್ರ ಬರೆಯಲಾಗಿತ್ತು. ಕೊರೊನಾ ಹಿನ್ನೆಲೆ ಈ ಕೆಲಸಕ್ಕೆ ಹಿನ್ನಡೆಯಾಗಿದ್ದು ಇಂದೇ ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿ ಟ್ರಕ್ ಟರ್ಮಿನಲ್ ಮ್ಯಾನೇಜಿಂಗ್ ಡೈರೆಕ್ಟರ್ ಅವರಿಗೆ ಈ ವಿಷಯ ಕುರಿತು ಪರಿಶೀಲನೆ ನಡೆಸುವಂತೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಸ್ಮಾರ್ಟ್ ಸಿಟಿ ಮ್ಯಾನೇಜಿಂಗ್ ಡೈರೆಕ್ಟರ್ ರವೀಂದ್ರ ಮಲ್ಲಾಪುರ ಮಾತನಾಡಿ, ಡಿವೈಡರ್ ಕೆಲಸ ಕೊರೊನಾ ಹಿನ್ನೆಲೆ ಸ್ಥಗಿತಗೊಂಡಿದ್ದು, ಈಗ ಈ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಇನ್ನು ಜಲಸಿರಿ ಯೋಜನೆಯ ಪೈಪ್‍ಗಳು ಸಹ ಹಾಗೆಯೇ ಆಗಿದ್ದು ಹೈಡ್ರೋ ಟೆಸ್ಟಿಂಗ್‍ಗಾಗಿ ಕ್ಯಾಪ್ ಹಾಕಿಲ್ಲ. ಶೀಘ್ರವಾಗಿ ಅದನ್ನು ಹಾಕುವ ಕೆಲಸ ಮಾಡಲಾಗುವುದು. ಎಸ್‍ಪಿ ಕಚೇರಿ ಮುಂದೆ ಸಹ ಕೆಲಸ ಆರಂಭಿಸಲಾಗುವುದು ಎಂದರು.
ಬಸ್ ಮಾಲೀಕರ ಸಂಘದ ಸದಸ್ಯ ಸುರೇಶ್ ಮಾತನಾಡಿ ತೊಗರಿ, ರಾಗಿ ಹುಲ್ಲು ಟೈರ್ಗಳಿಗೆ ಸಿಕ್ಕಿಹಾಕಿಕೊಂಡು ಸ್ಕಿಡ್ ಆಗಿ ರಸ್ತೆ ಅಪಘಾತ ಹೆಚ್ಚಾಗಿ ಸಂಭವಿಸುತ್ತವೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.