ಹರಿಹರ: ಎಲ್ಲಾ ಸಿಬ್ಬಂದಿಯ ಶ್ರಮದ ಫಲವಾಗಿ ಈ ಪ್ರಶಸ್ತಿ ನಮ್ಮ ಆಸ್ಪತ್ರೆಗೆ ಲಭಿಸಿದೆ ಎಂದು ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆ ಮುಖ್ಯ ವೈದ್ಯಾಧಿಕಾರಿ ಎಲ್.ಹನುಮಾ ನಾಯಕ್ ಹೇಳಿದರು.
ದಾವಣಗೆರೆ ಜಿಲ್ಲಾ ಕಾಯಕಲ್ಪ ಪ್ರಶಸ್ತಿ -2018-19 ದಾಮೋದರ ಮಂಜುನಾಥ ಪೈ ಸ್ಮಾರಕ ಸಾರ್ವಜನಿಕ ಆಸ್ಪತ್ರೆಗೆ ಲಭಿಸಿರುವ ಹಿನ್ನೆಲೆ ಆಸ್ಪತ್ರೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಅಭಿನಂದನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸರ್ಕಾರದಿಂದ ಜಿಲ್ಲಾ ಮಟ್ಟದಲ್ಲಿ ಕೊಡಲ್ಪಡುವ ಈ ಪ್ರಶಸ್ತಿಯು ಸಾರ್ವಜನಿಕ ಆಸ್ಪತ್ರೆಯ ಆರೋಗ್ಯ ಸೌಲಭ್ಯಗಳ ದುರಸ್ತಿ, ನೈರ್ಮಲ್ಯ ಮತ್ತು ಶುಚಿತ್ವ ಕಾಪಾಡುವಿಕೆ, ತ್ಯಾಜ್ಯ ನಿರ್ವಹಣೆ, ಸೋಂಕು ನಿಯಂತ್ರಣ, ಬೆಂಬಲ ಸೇವೆಗಳ ಸಂಕೇತವಾಗಿ ಪಡೆದಿದ್ದೇವೆ. ಇದಕ್ಕೆ ಆಸ್ಪತ್ರೆಯ ಎಲ್ಲಾ ಸಿಬ್ಬಂದಿ ಮತ್ತು ಆರೋಗ್ಯ ಸುರಕ್ಷಾ ಸಮಿತಿಯ ಸದಸ್ಯರು ಕಾರಣೀಭೂತರಾಗಿದ್ದಾರೆ. ಆಸ್ಪತ್ರೆಯ ವೈದ್ಯಾಧಿಕಾರಿಗಳು, ವೈದ್ಯರು, ಶುಶ್ರೂಷಕಿಯರು, ಸಿಬ್ಬಂದಿ, ಡಿ ದರ್ಜೆ ನೌಕರರು ಮತ್ತು ಸಹಾಯಕರು ನಿಸ್ವಾರ್ಥ, ನಿಷ್ಠೆಯಿಂದ ಸೇವೆ ಸಲ್ಲಿಸಿದ ಪರಿಣಾಮವಾಗಿ ಈ ಪ್ರಶಸ್ತಿ ನಮ್ಮ ಆಸ್ಪತ್ರೆಗೆ ಲಭಿಸಿದೆ. ಅದನ್ನು ಕಾಪಾಡಿಕೊಂಡು ಹೋಗುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಮೇಲಿದೆ ಎಂದರು.