ದಾವಣಗೆರೆ: ಗುಜರಾತ್ನ ಅಹಮದಾಬಾದ್ ನಿಂದ ಖಾಸಗಿ ಬಸ್ನಲ್ಲಿ ಬಂದಿದ್ದ ಶಿವಮೊಗ್ಗದ ಎಂಟು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದ್ದು, ಇವರ ಜೊತೆ ಪ್ರಯಾಣ ಮಾಡಿದ್ದ ಎಂಟು ಮಂದಿ ತಪ್ಪಿಸಿಕೊಂಡಿಲ್ಲ. ಈಗಾಗಲೇ ಅವರನ್ನು ಕರೆತಂದು ಐಸೋಲೇಷನ್ ವಾರ್ಡ್ನಲ್ಲಿ ಇಡಲಾಗಿದೆ. ಅವರ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸ್ಪಷ್ಟನೆ ನೀಡಿದ್ದಾರೆ.
ಶಿವಮೊಗ್ಗದವರ ಜೊತೆ ಬಂದಿದ್ದವರು ತಪ್ಪಿಸಿಕೊಂಡಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ಅವರೆಲ್ಲಾ ನಮ್ಮ ಕಸ್ಟಡಿಯಲ್ಲಿಯೇ ಇದ್ದಾರೆ. ಎಂಟು ಮಂದಿಯ ಮೇಲೂ ತೀವ್ರ ನಿಗಾ ವಹಿಸಲಾಗಿದೆ ಎಂದು ಡಿಸಿ ಸ್ಪಷ್ಟಪಡಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವದಂತಿ ಹಬ್ಬಿಸಿದವ ಅರೆಸ್ಟ್...!
ಕೊರೊನಾ ಕುರಿತಂತೆ ಆಸ್ಪತ್ರೆ ಹಾಗೂ ಅಲ್ಲಿನ ವೈದ್ಯರ ಬಗ್ಗೆ ಸುಳ್ಳು ಮಾಹಿತಿಯನ್ನು ವ್ಯಾಟ್ಸ್ಆ್ಯಪ್ನಲ್ಲಿ ಆಡಿಯೋ ಮೂಲಕ ಸುಳ್ಳು ಸುದ್ದಿ ಹಬ್ಬಿಸಿದ ಆರೋಪಿ ಗಿರೀಶ್ ದೇವರಮನಿ ಎಂಬಾತನನ್ನು ಬಂಧಿಸಲಾಗಿದೆ. ಜನರನ್ನು ದಾರಿ ತಪ್ಪಿಸುವ, ಬೇಜವಾಬ್ದಾರಿತನ ಹಾಗೂ ದುರುದ್ದೇಶಪೂರಿತವಾಗಿ ಸಮಾಜದಲ್ಲಿ ಕೆಟ್ಟ ಸಂದೇಶ ಬರುವಂತೆ ಮಾಡಿದ್ದ ಈತನ ವಿರುದ್ಧ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಆರೋಪಿಯನ್ನು ಅರೆಸ್ಟ್ ಮಾಡಿ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಎಸ್ಪಿ ಹನುಮಂತರಾಯ ತಿಳಿಸಿದ್ದಾರೆ.
ಮತ್ತೊಂದು ಆಡಿಯೋಗೆ ಸಂಬಂಧಿಸಿದಂತೆ ಇಬ್ಬರ ಮೇಲೆ ಪ್ರಕರಣ ದಾಖಲಾಗಿದೆ. ಈ ಆಡಿಯೋದಲ್ಲಿ ಜಿಲ್ಲೆಯಲ್ಲಿ 120 ಮಂದಿಗೆ ಕೊರೊನಾ ಸೋಂಕು ಬಂದಿದೆ. ದಿನಕ್ಕೆ ಹತ್ತು ಪ್ರಕರಣಗಳಂತೆ
ಇನ್ಸ್ಟಾಲ್ ಮೆಂಟ್ ನಂತೆ ಬಿಡುತ್ತಿದ್ದಾರೆ ಎಂಬರ್ಥದ ಸಂಭಾಷಣೆ ಇದಾಗಿತ್ತು. ಈ ಆಡಿಯೋ ಮಾಡಿರುವ ಎಂಜಿನಿಯರಿಂಗ್ ವಿದ್ಯಾರ್ಥಿ ವಿನಯ್ ಪ್ರಮುಖ ಆರೋಪಿಯಾಗಿದ್ದು, ಸಂತೋಷ್
ಕಠಾರಿ ಇನ್ನೋರ್ವ ಆರೋಪಿ. ಇವರಿಬ್ಬರ ವಿರುದ್ಧ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಜಾಲತಾಣಗಳಲ್ಲಿ ಏನು ಮಾಡಿದರೂ ನಡೆಯುತ್ತದೆ ಎಂಬ ಮನೋಭಾವ ಬಿಡಬೇಕು. ಯಾರು ಏನು ಮಾಡುವುದಿಲ್ಲ ಎಂಬ ಭ್ರಮೆಯಲ್ಲಿ ಕೆಲವರಿದ್ದಾರೆ. ಅನಗತ್ಯವಾಗಿ, ಸಮಾಜದಲ್ಲಿ
ಕೆಟ್ಟ ಸಂದೇಶ ಬರುವಂತೆ ಯಾರೇ ಇನ್ನು ಮುಂದೆ ಮಾಡಿದರೂ ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಕಾನೂನಿನ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಸ್ಪಿ ಎಚ್ಚರಿಕೆ ನೀಡಿದ್ದಾರೆ.
ಬೇರೆ ರಾಜ್ಯಗಳಿಂದ ಇಲ್ಲಿಗೆ ಬರುವವರ ಸಂಪೂರ್ಣ ಮಾಹಿತಿ ನಮಗೆ ಬರುತ್ತದೆ. ಎಲ್ಲರನ್ನೂ ಕ್ವಾರಂಟೈನ್ ಮಾಡಿ, ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿಕೊಡುತ್ತೇವೆ. ಯಾರೂ ಕೂಡ ತಪ್ಪಿಸಿಕೊಳ್ಳಲು
ಆಗದು ಎಂದು ಹನುಮಂತರಾಯ ತಿಳಿಸಿದರು.