ದಾವಣಗೆರೆ: ತಾಲೂಕಿನಲ್ಲಿ ಬಂದ ಆ ಒಂದು ಮಳೆ ರೈತರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಸಾಲಸೋಲ ಮಾಡಿ ಬೆಳೆದ ಬೆಳೆ ಇನ್ನೇನು ಕೈ ಸೇರಿತು ಎನ್ನುವಷ್ಟರಲ್ಲಿ ಸುರಿದ ಧಾರಾಕಾರ ಮಳೆ ರೈತರ ಬಾಳಿಗೆ ತಣ್ಣೀರೆರಚಿದೆ.
ಶಾಸಕ ರವೀಂದ್ರನಾಥ್ ಭೇಟಿ :
ದಾವಣಗೆರೆ ತಾಲೂಕಿನ ಬೇತೂರು, ಪುಟುಗನಾಳ್ ಗ್ರಾಮದಲ್ಲಿ ಜನರು ಇಷ್ಟು ದಿನ ಮಳೆ ಬಂದರೆ ಸಾಕು ಎಂದು ಆಕಾಶದ ಕಡೆ ಮುಖ ಮಾಡಿ ಕುಳಿತಿದ್ದರು. ಆದರೆ, ಕಳೆದ 2 ದಿನಗಳ ಹಿಂದೆ ಸುರಿದ ಆ ಒಂದು ಮಳೆ ರೈತರ ಬದುಕನ್ನೇ ಮೂರಾಬಟ್ಟೆ ಮಾಡಿದೆ. ಗಾಳಿ ಮಳೆಯ ರಭಸಕ್ಕೆ ಅಡಿಕೆ, ಬಾಳೆ, ಭತ್ತದ ಬೆಳೆ ಸಂಪೂರ್ಣವಾಗಿ ನೆಲಕಚ್ಚಿವೆ. ಸಾಲಸೋಲ ಮಾಡಿ ಉತ್ತಮ ಬೆಳೆಯ ನಿರೀಕ್ಷೇಯಲ್ಲಿದ್ದ ರೈತರ ಬದುಕಿನ ಜೊತೆ ವರುಣ ದೇವ ಚೆಲ್ಲಾಟವಾಡಿದ್ದಾನೆ. ಹಾನಿಗೊಳಗಾದ ಸ್ಥಳಗಳಿಗೆ ಭೇಟಿ ನೀಡಿದ ಶಾಸಕ ಎಸ್.ಎ.ರವೀಂದ್ರನಾಥ್ ರೈತರಿಗೆ ಧೈರ್ಯ ತುಂಬಿದರು.
ಪರಿಹಾರಕ್ಕೆ ಒತ್ತಾಯ :
ತಾಲೂಕಿನಲ್ಲಿ 500 ಎಕರೆ ಪ್ರದೇಶ ಗಾಳಿ, ಮಳೆಗೆ ಸಿಲುಕಿ ಹಾಳಾಗಿದ್ದು, ಸರ್ಕಾರ ಕೂಡಲೇ ಪರಿಹಾರ ನೀಡುವಂತೆ ಶಾಸಕ ರವೀಂದ್ರನಾಥ್ ಸರ್ಕಾರವನ್ನು ಒತ್ತಾಯ ಪಡಿಸಿದ್ದಾರೆ.
ನೆಲಕ್ಕುರುಳಿದ್ದ ಬೆಳೆ :
ಮಳೆಯಿಂದಾಗಿ ಫಸಲಿಗೆ ಬಂದ ಅಡಿಕೆ, ಬಾಳೆ, ಪಪ್ಪಾಯಿ ತೋಟಗಳು ನೆಲಕ್ಕೆ ಉರುಳಿವೆ. ಅಷ್ಟೇ ಅಲ್ಲದೆ ಕಟಾವಿಗೆ ಬಂದ ಭತ್ತವೂ ಕೂಡ ಹಾಳಾಗಿದ್ದು ರೈತರನ್ನು ಆತಂಕಕ್ಕೆ ದೂಡಿದೆ. ಮಳೆ ಬಂದರೆ ಸಾಕಪ್ಪ ಎನ್ನುತ್ತಿದ್ದ ರೈತರು ಮಳೆ ಏಕಾದ್ರೂ ಬಂತಪ್ಪಾ ಎಂದು ಹಿಡಿಶಾಪ ಹಾಕುತ್ತಿದ್ದಾರೆ. ಶಾಸಕರು ಹಾನಿಗೊಳಗಾದ ಸ್ಥಳಕ್ಕೆ ಭೇಟಿ ನೀಡಿದ್ದು, ಬೆಳೆ ಕಳೆದುಕೊಂಡ ರೈತರಿಗೆ ಆದಷ್ಟು ಬೇಗ ಪರಿಹಾರ ಕೊಡಿಸುವಂತೆ ಮನವಿ ಮಾಡಿದ್ದಾರೆ.