ದಾವಣಗೆರೆ: ಮನುಷ್ಯ ಹಾಗು ಜಾನುವಾರುಗಳ ಮಧ್ಯೆ ಬೆಸೆಯಲಾಗದ ಸಂಬಂಧ ಇರುತ್ತದೆ. ಜಾನುವಾರುಗಳು ತನ್ನ ಮಾಲೀಕರು ಹೇಳಿದಂತೆ ಕೇಳುವುದನ್ನು ಕೂಡ ನಾವು ನೋಡಿದ್ದೇವೆ. ತನ್ನ ಮಾಲೀಕನಿಗೆ ಅಪಾಯ ಎದುರಾದಾಗಲೆಲ್ಲ ಅವುಗಳು ತಮ್ಮ ಪ್ರಾಣ ಕೊಟ್ಟು ಮಾಲೀಕನನ್ನು ಉಳಿಸಿರುವ ಘಟನೆಗಳು ಅನೇಕ. ಇದೀಗ ದಾವಣಗೆರೆ ಜಿಲ್ಲೆಯಲ್ಲಿ ಹಸು ತನ್ನ ಮಾಲೀಕನನ್ನು ಬಚಾವ್ ಮಾಡಿದ್ದು, ಅದಕ್ಕೆ ಶ್ವಾನ ಕೂಡ ಬೆಂಬಲ ಕೊಟ್ಟ ಅಪರೂಪದ ಘಟನೆ ಬೆಳಕಿಗೆ ಬಂದಿದೆ.
ಘಟನೆಯ ವಿವರ: ಹಸು ಚಿರತೆಯೊಂದಿಗೆ ಹೋರಾಡಿ ತನ್ನ ಮಾಲೀಕನನ್ನು ಚಿರತೆಯಿಂದ ಕಾಪಾಡಿತು. ಚಿರತೆಯನ್ನು ಹಿಮ್ಮೆಟ್ಟಿಲು ಹಸುವಿಗೆ ಶ್ವಾನ ಸಾಥ್ ಕೊಟ್ಟಿತು. ಇಂಥ ಅಪರೂಪದ ಘಟನೆಗೆ ದಾವಣಗೆರೆ ಜಿಲ್ಲೆ ಸಾಕ್ಷಿಯಾಗಿದೆ. ಮಾಲೀಕನನ್ನು ಚಿರತೆಯ ಬಾಯಿಂದ ಪುಣ್ಯಕೋಟಿ ಹಸು ಹಾಗು ಶ್ವಾನ ಸೇರಿ ರಕ್ಷಿಸಿರುವ ಘಟನೆ ಚನ್ನಗಿರಿ ತಾಲೂಕಿನ ಉಬ್ರಾಣಿ ಹೋಬಳಿ ಕೊಡತಿಕೆರೆ ಗ್ರಾಮದಲ್ಲಿ ನಡೆದಿದೆ.
ತನ್ನ ಮಾಲೀಕನ ಮೇಲೆ ಚಿರತೆ ಏಕಾಏಕಿ ದಾಳಿ ಮಾಡಿದ್ದನ್ನು ಗಮನಿಸಿದ ಹಸು, ಚಿರತೆಗೆ ಬಲವಾಗಿ ಗುದ್ದಿದೆ. ಜೊತೆಗಿದ್ದ ಮಾಲೀಕನ ಶ್ವಾನ ಕೂಡ ಚಿರತೆ ಮೇಲೆ ಎಗರಿ ಹಿಮ್ಮೆಟ್ಟಿಸಿದೆ. ಕೊಡತಿಕೆರೆ ಗ್ರಾಮದ ರೈತ ಕರಿಹಾಲಪ್ಪ (58) ಚಿರತೆ ದಾಳಿಯಿಂದ ಪಾರಾದ ವ್ಯಕ್ತಿ. ಈ ಘಟನೆ ಸೋಮವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಇದನ್ನೂ ಓದಿ: ಅಯ್ಯಪ್ಪ ಮಾಲಾಧಾರಿಗಳ ಜೊತೆ ಶಬರಿಮಲೆಗೆ ಪಾದಯಾತ್ರೆ ನಡೆಸಿದ ಶ್ವಾನ..
ಕರಿಹಾಲಪ್ಪ ಅವರು ಸೋಮವಾರ ಬೆಳಗ್ಗೆ ತೋಟಕ್ಕೆ ಹಸು ಮೇಯಿಸಲು ತೆರಳಿದ್ದರು. ಹಸುವನ್ನು ಮೇಯಲು ಬಿಟ್ಟು ತೋಟದ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ ಹೊಂಚು ಹಾಕಿ ಕೂತಿದ್ದ ಚಿರತೆ ಕರಿಹಾಲಪ್ಪ ಅವರ ಮೇಲೆರಗಿದೆ. ಇದನ್ನು ಗಮನಿಸಿದ ಹಸು ಮೇಯುವುದನ್ನು ಬಿಟ್ಟು ಬಂದು ಚಿರತೆಗೆ ತನ್ನ ಕೊಂಬಿನಿಂದ ಬಲವಾಗಿ ಗುದ್ದಿದೆ. ಅಷ್ಟಕ್ಕೆ ಚಿರತೆ ಹಾರಿ ಮೇಲಿಂದ ದೊಪ್ಪನೆ ನೆಲಕ್ಕೆ ಬಿದ್ದಿದೆ. ನೆಲಕ್ಕೆ ಬಿದ್ದ ಚಿರತೆಯನ್ನು ಹಿಮ್ಮೆಟಿಸಲು ಶ್ವಾನ ಕೂಡ ಮೇಲೆರಗಿದ್ದು, ಹಸು ಹಾಗು ಶ್ವಾನ ಎರಡೂ ಚಿರತೆಯನ್ನು ಹಿಮ್ಮೆಟ್ಟಿಸಿದವು.
ಇದನ್ನೂ ಓದಿ: ಸತ್ತಂತೆ ನಟಿಸಿ ಬದುಕುಳಿದ ಟಾಮಿ.. ಚಿರತೆ ಬಾಯಿಂದ ಪಾರಾಯ್ತು ಬುದ್ಧಿವಂತ ಶ್ವಾನ
'ಚಿರತೆ ಭಯದಲ್ಲಿ 80 ಕುಟುಂಬಗಳು': ರೈತ ಕರಿಹಾಲಪ್ಪ ಮಾತನಾಡಿ, "ಕೊಡತಿಕೆರೆ ಗ್ರಾಮದಲ್ಲಿ ಚಿರತೆ ಕಾಟ ವಿಪರೀತ. 80 ಕಟುಂಬಗಳು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ. ಗ್ರಾಮದಲ್ಲಿದ್ದ ನಾಯಿಗಳ ಮೇಲೆ ಚಿರತೆ ಕೂಡ ದಾಳಿ ನಡೆಸಿದ್ದು, ಚಿರತೆಗೆ ನಾಯಿಗಳು ಆಹಾರವಾಗುತ್ತಿವೆ. ಆದರೆ ನಮಗೆ ಸೇರಿದ ಶ್ವಾನ ಹಾಗು ಹಸು ಮಾತ್ರ ಚಿರತೆ ವಿರುದ್ಧ ಶೌರ್ಯ ಮೆರೆದವು. ಕೃಷಿಯನ್ನು ನಂಬಿರುವ ರೈತರು ಚಿರತೆ ಹಾವಳಿಯಿಂದ ಜಮೀನಿಗೆ ತೆರಳಲು ಹಿಂದೇಟು ಹಾಕ್ತಿದ್ದಾರೆ. ಕಳೆದೊಂದು ತಿಂಗಳಿಂದ ಈ ಚಿರತೆ ಕಾಟ ಹೆಚ್ಚಾಗಿದ್ದು, ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ. ಮನುಷ್ಯರಿಗೆ ಎಂದಿಗೂ ಈ ಚಿರತೆ ತೊಂದರೆ ಕೊಟ್ಟಿರಲಿಲ್ಲ. ಆದರೆ ನನ್ನ ಎದುರಿಗೆ ಮೊನ್ನೆ ಚಿರತೆ ಬಂದು ನಿಂತು, ದಾಳಿ ಮಾಡಿದಾಗ ಪ್ರಾಣವೇ ಹೋದಂತಾಗಿತ್ತು. ಆದರೆ, ನಮ್ಮ ಗೌರಿ(ಹಸು) ನನ್ನ ಜೀವ ಉಳಿಸಿತು" ಎಂದು ಹರ್ಷ ವ್ಯಕ್ತಪಡಿಸಿದರು.
ಇದನ್ನೂ ಓದಿ: ಹುಲಿ ಮತ್ತು ಚಿರತೆಯಿಂದ 263 ದಾಳಿ.. 34 ಜನರ ಸಾವು, 229 ಮಂದಿಗೆ ಗಾಯ