ದಾವಣಗೆರೆ : ಕೊರೊನಾ ಭೀತಿ ನಡುವೆ ಪದವಿ ಕಾಲೇಜುಗಳ ಪುನರಾರಂಭವಾಗಿದ್ದು, ಕಾಲೇಜಿಗೆ ಆಗಮಿಸುವ ವಿದ್ಯಾರ್ಥಿಗಳಿಗೆ ಆತ್ಮಸ್ಥೈರ್ಯ ತುಂಬಲು ನಗರದ ಎ.ವಿ ಕಮಲಮ್ಮ (ಎವಿಕೆ) ಮಹಿಳಾ ಕಾಲೇಜು ಹೊಸ ಐಡಿಯಾ ಮಾಡಿದೆ.
ಪದವಿ ಕಾಲೇಜುಗಳ ಅಂತಿಮ ವರ್ಷದ ತರಗತಿಗಳು ಪುನರಾರಂಭವಾಗಿದ್ದರೂ, ಪೂರ್ಣ ಪ್ರಮಾಣದಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿಲ್ಲ. ವಿದ್ಯಾರ್ಥಿಗಳು ಮತ್ತು ಪೋಷಕರಲ್ಲಿ ಕೋವಿಡ್ ಭೀತಿ ಇರುವುದರಿಂದ ಕಾಲೇಜು ಕಡೆ ಮುಖ ಮಾಡುತ್ತಿಲ್ಲ. ಎವಿಕೆ ಮಹಿಳಾ ಕಾಲೇಜಿನಲ್ಲೂ ನವೆಂಬರ್ 17 ರಿಂದ ಅಂತಿಮ ವರ್ಷದ ಬಿಎ, ಬಿಎಸ್ಸಿ, ಬಿಕಾಂ ತರಗತಿಗಳು ಆರಂಭವಾಗಿದೆ. ಮೊದಲ ದಿನ ಇಬ್ಬರು ವಿದ್ಯಾರ್ಥಿನಿಯರು ಮಾತ್ರ ತರಗತಿಗೆ ಬಂದಿದ್ದರು. ಬಳಿಕ, ವಿದ್ಯಾರ್ಥಿಗಳ ಸಂಖ್ಯೆ 24 ಕ್ಕೇರಿತ್ತು, ಈಗ ಈ ಸಂಖ್ಯೆ ನೂರು ದಾಟಿದೆ.
ವಿದ್ಯಾರ್ಥಿನಿಯರು ಮತ್ತು ಪೋಷಕರಲ್ಲಿ ಧೈರ್ಯ ತುಂಬಿ ಕಾಲೇಜಿಗೆ ಬರುವಂತೆ ಮಾಡಲು ಕಾಲೇಜಿನ ಆಡಳಿತ ಮಂಡಳಿ ವಿಶೇಷ ಪ್ಲಾನ್ ಮಾಡಿದೆ. ಅದೇನಂದರೆ, ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ 600 ವಿದ್ಯಾರ್ಥಿನಿಯರ ಗಂಟಲು ದ್ರವ ಪರೀಕ್ಷೆಯನ್ನು ಸಿಜೆ ಆಸ್ಪತ್ರೆಯ ಸಹಕಾರ ಪಡೆದು ನಡೆಸಲಾಗುತ್ತಿದೆ. ಸೋಮವಾರ ಒಂದೇ ದಿನ ನೂರಕ್ಕೂ ಹೆಚ್ಚು ವಿದ್ಯಾರ್ಥಿನಿಯರ ಕೋವಿಡ್ ಪರೀಕ್ಷೆ ನಡೆಸಲಾಗಿದೆ. ನಾಳೆಯೊಳಗೆ ಎಲ್ಲರ ಕೋವಿಡ್ ಟೆಸ್ಟ್ ಮುಗಿಸಲು ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಕೋವಿಡ್ ಪರೀಕ್ಷೆ ಎಂದಾಕ್ಷಣ ಭಯ ಪಟ್ಟುಕೊಳ್ಳುತ್ತಿದ್ದರು. ಕೆಲವರು ಕಾಲೇಜಿನ ಒಳಗಡೆಯೇ ಬರುತ್ತಿರಲಿಲ್ಲ. ಈಗ ಒಬ್ಬರ ಮೇಲೊಬ್ಬರಂತೆ ಕೋವಿಡ್ ಪರೀಕ್ಷೆಗೆ ಒಳಗಾಗುತ್ತಿರುವುದರಿಂದ ವಿದ್ಯಾರ್ಥಿನಿಯರಲ್ಲಿ ಭಯ ನಿವಾರಣೆಯಾಗುತ್ತಿದೆ. ಈಗ ವಿದ್ಯಾರ್ಥಿನಿಯರೇ ಸ್ವತಃ ಪರೀಕ್ಷೆಗೆ ಒಳಗಾಗುತ್ತಿದ್ದಾರೆ. ಸರ್ಕಾರ ಕೂಡ ವಿದ್ಯಾರ್ಥಿಗಳ ಕೊರೊನಾ ನೆಗೆಟಿವ್ ಸರ್ಟಿಫಿಕೆಟ್ ಇದ್ದರೆ ಮಾತ್ರ ತರಗತಿಗೆ ಬರಲು ಅವಕಾಶ ನೀಡುವಂತೆ ಆದೇಶದಲ್ಲಿ ತಿಳಿಸಿದೆ. ಇದನ್ನು ಪಾಲಿಸಿಯೇ ಕಾಲೇಜಿನ ತರಗತಿಗಳನ್ನು ನಡೆಸಲಾಗುವುದು ಎಂದು ಪ್ರಾಚಾರ್ಯರಾದ ಡಾ. ಬಿ. ಪಿ. ಕುಮಾರ್ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.
ನಮಗೆ ಕೊರೊನಾ ಟೆಸ್ಟ್ ನಡೆಸಿ ತರಗತಿ ನಡೆಸುವ ನಿರ್ಧಾರ ಸ್ವಾಗತಾರ್ಹ, ಮೊದಲಿದ್ದ ಭಯ ಈಗಿಲ್ಲ. ಒಳ್ಳೆಯ ಉದ್ದೇಶ ಇಟ್ಟುಕೊಂಡು ಕಾಲೇಜಿನ ಆಡಳಿತ ಮಂಡಳಿ ನಡೆಸುತ್ತಿರುವ ಶ್ಲಾಘಣೀಯ. ನಮಲ್ಲಿ ಮತ್ತು ಪೋಷಕರಲ್ಲಿದ್ದ ಆತಂಕವೂ ದೂರವಾಗಿದೆ ಎಂದು ವಿದ್ಯಾರ್ಥಿನಿ ದಿವ್ಯಾ ಹೇಳಿದ್ದಾರೆ.
ಜಿಲ್ಲೆಯಲ್ಲಿ 2,967 ಬೋಧಕ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷಾ ವರದಿ ಬಂದಿದ್ದು, ಮೂವರಲ್ಲಿ ಪಾಸಿಟಿವ್ ಬಂದಿದೆ. 1,890 ನೆಗೆಟಿವ್ ಬಂದಿದ್ದು, 1,074 ಸ್ಯಾಂಪಲ್‌ಗಳ ವರದಿ ಬರಬೇಕಿದೆ. ಇನ್ನು ಬೋಧಕೇತರ 1,963 ಸಿಬ್ಬಂದಿ ಕೋವಿಡ್ ಟೆಸ್ಟ್ ಮಾಡಿಸಿದ್ದು, 970 ಜನರ ಸ್ವ್ಯಾಬ್ ವರದಿ ನೆಗೆಟಿವ್ ಬಂದಿದೆ. 993 ಸಿಬ್ಬಂದಿ ವರದಿ ಬರಬೇಕಿದೆ. 6,749 ವಿದ್ಯಾರ್ಥಿಗಳ ಮಾದರಿ ಪಡೆಯಲಾಗಿದ್ದು, 9 ವಿದ್ಯಾರ್ಥಿಗಳಲ್ಲಿ ಸೋಂಕು ಇರುವುದು ಖಚಿತವಾಗಿದೆ. 4,380 ವಿದ್ಯಾರ್ಥಿಗಳ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. 2,360 ವಿದ್ಯಾರ್ಥಿಗಳ ವರದಿಗಾಗಿ ಕಾಯಲಾಗ್ತಿದೆ.