ದಾವಣಗೆರೆ: ಮಾಸಾಶನದಲ್ಲಿ ಬಂದಂತಹ ಹಣದಿಂದ ವೃದ್ಧ ದಂಪತಿ ಜೀವನ ಸಾಗಿಸುತ್ತಿತ್ತು. ಇವರಿಗೆ ಜೀವನ ನಡೆಸಲು ಸೂರಿಲ್ಲದೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದರು.ಈ ಪರಿಸ್ಥಿತಿ ಕಣ್ಣಾರೆ ಕಂಡ ಪಾಲಿಕೆ ಸದಸ್ಯ ತಮ್ಮ ಮಗನ ಹುಟ್ಟುಹಬ್ಬಕ್ಕೆ ವೃದ್ಧ ದಂಪತಿಗೆ ಮನೆ ಕಟ್ಟಿಸಿಕೊಟ್ಟು ಆಸರೆಯಾಗಿದ್ದಾರೆ.
ಇಲ್ಲಿನ 19ನೇ ವಾರ್ಡ್‌ನ ಶೇಖರಪ್ಪ ನಗರದ ಬಿ-ಬ್ಲಾಕಿನ ದೊರೆಸ್ವಾಮಿ-ಚಂದ್ರಮ್ಮ ಎಂಬ ವೃದ್ಧ ದಂಪತಿ ಮನೆ ಇಲ್ಲದೆ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿದ್ದರು. ಮಳೆ ಬಂದರೆ ಗುಡಿಸಲಿ ಪರಿಸ್ಥಿತಿ ಹೇಳ ತೀರಾದಾಗಿತ್ತು. ಇವರಿಗೆ ಮೂವರು ಮಕ್ಕಳಿದ್ದರು. ಆದರೆ ಮದ್ಯಪಾನಕ್ಕೆ ಜೋತು ಬಿದ್ದಿದ್ದ ಮಕ್ಕಳು ತೀರಿಕೊಂಡಿದ್ದಾರೆ.
ಇದೇ ಸಂದರ್ಭದಲ್ಲಿ ವೃದ್ಧೆ ಚಂದ್ರಮ್ಮ ಗುಡಿಸಲಿಗೆ ಹಾಕಿಕೊಳ್ಳಲು ಬ್ಯಾನರ್ ಟಾರ್ಪಾಲ್ ಕೊಡಿಸುವಂತೆ ಪಾಲಿಕೆ ಸದಸ್ಯ ಆರ್.ಎಲ್. ಶಿವಪ್ರಕಾಶ್ ಎಂಬುವವರ ಬಳಿ ಅಂಗಲಾಚಿ ಬೇಡಿಕೊಂಡಿದ್ದಳು. ವೃದ್ಧ ದಂಪತಿಯ ಸಮಸ್ಯೆಗೆ ಮರುಗಿದ ಪಾಲಿಕೆ ಸದಸ್ಯ ತಗಡು ಹಾಕಿ ಚಿಕ್ಕದೊಂದು ಮನೆ ನಿರ್ಮಿಸಿ ಕೊಟ್ಟು ತಮ್ಮ ಮಗನ ಹುಟ್ಟುಹಬ್ಬ ಅಲ್ಲೇ ಆಚರಿಸಿ ಸಂಸತ ವ್ಯಕ್ತಪಡಿಸಿದರು.
ಮಗನ ಹುಟ್ಟುಹಬ್ಬ ಆಚರಿಸಿದರೆ ಇದರ ವೆಚ್ಚಕ್ಕೆ ಇನ್ನಷ್ಟು ಹಣ ಸೇರಿಸಿ ಅಗತ್ಯವುಳ್ಳವರಿಗೆ ಸಹಾಯ ಮಾಡಿದ್ರೆ ಹೇಗೆ ಎಂಬ ಚಿಂತನೆ ಶಿವಪ್ರಕಾಶ್‌ಗೆ ಮೂಡಿದ ಬೆನ್ನಲ್ಲೇ ಮನೆ ನಿರ್ಮಿಸಿ ಕೊಟ್ಟಿದ್ದಾರೆ. ಇದ್ದವರಿಗೆ ಒಂದು ಹೊತ್ತಿನ ಊಟ ನೀಡುವ ಬದಲು ಅಗತ್ಯವುಳ್ಳವರಿಗೆ ಒಂದು ಶಾಶ್ವತ ಸೂರು ಸೃಷ್ಟಿಸೋದು ಆತ್ಮಸಂತೃಪ್ತಿ ನೀಡುವ ಕೆಲಸ ಮಾಡಿರುವ ಪಾಲಿಕೆ ಸದಸ್ಯನಿಗೆ ಪ್ರಶಂಸೆಯ ಸುರಿಮಳೆ ಬಂದಿದೆ.
ಪಾಲಿಕೆ ಸದಸ್ಯನ ಕ್ಷಣಿಕ ಸುಖದ ತ್ಯಾಗ, ಮತ್ತೊಬ್ಬರ ಕಷ್ಟಕ್ಕೆ ಮಿಡಿಯುವ ಗುಣದಿಂದ ದೊರೆಸ್ವಾಮಿ-ಚಂದ್ರಮ್ಮ ದಂಪತಿ ಕುಟುಂಬಕ್ಕೊಂದು ಸೂರು ಸಿಕ್ಕಿದೆ.