ದಾವಣಗೆರೆ: ಗುಜರಾತ್ನಿಂದ ಕೊರೊನಾ ಸೋಂಕು ಬಂದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸ್ಪಷ್ಟನೆ ನೀಡಿದ್ದಾರೆ.
ಜಿಲ್ಲಾಡಳಿತ ಭವನದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾವು ಕಾಯುತ್ತಿದ್ದ ಎರಡು ಸ್ಯಾಂಪಲ್ ನೆಗೆಟಿವ್ ಬಂದಿದೆ. ಗುಜರಾತ್ಗೆ ಮೃತ ವೃದ್ಧನ ಸೊಸೆ ಹೋಗಿ ಬಂದಿದ್ದರು. ಆದ್ರೆ ಗುಜರಾತ್ನಿಂದ ಬಂದ ಇಬ್ಬರಲ್ಲಿ ಸೋಂಕು ಕಂಡು ಬಂದಿಲ್ಲ. ಹಾಗಾಗಿ ಕೊರೊನಾ ಸೋಂಕು ದಾವಣಗೆರೆಗೆ ಬಂದ ಬಗ್ಗೆ ಶೋಧ ಮುಂದುವರೆದಿದೆ ಎಂದು ಮಾಹಿತಿ ನೀಡಿದರು.
ರೋಗಿ ಸಂಖ್ಯೆ 556ನೇ ಸೋಂಕಿತ 69 ವರ್ಷದ ವೃದ್ಧನಿಗೆ ಸೋಂಕು ತಗುಲಿ ಸಾವನ್ನಪ್ಪಿದ್ದರು. ವೃದ್ಧನ ಮೂವರು ಸೊಸೆಯರು, ಪುತ್ರ ಹಾಗೂ ಒಂದು ವರ್ಷದ ಮೊಮ್ಮಗನಲ್ಲಿ ಸೋಂಕು ಇದ್ದದ್ದು ದೃಢಪಟ್ಟಿತ್ತು. ಗುಜರಾತ್ನಿಂದ ಸೋಂಕು ಬಂದಿರಬಹುದು ಎಂಬ ಶಂಕೆ ವ್ಯಕ್ತಪಡಿಸಲಾಗಿತ್ತಾದರೂ ಈಗ ಅಲ್ಲಿಂದ ಬಂದಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ಈರುಳ್ಳಿ ತುಂಬಿದ ಲಾರಿಯಲ್ಲಿ ಈರುಳ್ಳಿ ವ್ಯಾಪಾರಿಗೆ ಕೊರೊನಾ ಸೋಂಕು ತಗುಲಿತ್ತು. 612ನೇ ಸೋಂಕಿತ ವ್ಯಕ್ತಿ ಬಾಗಲಕೋಟೆ, ಹಾಸನ ಜಿಲ್ಲೆಯ ಜಾವಗಲ್ ಸೇರಿದಂತೆ ಹಲವೆಡೆ ಓಡಾಡಿದ್ದು, ಈ ಬಗ್ಗೆ ಮಾಹಿತಿ ಕಲೆಹಾಕಲಾಗುತ್ತಿದೆ. ಆದಷ್ಟು ಬೇಗ ಈ ಬಗ್ಗೆ ಮಾಹಿತಿ ಸಿಗಲಿದೆ. ಆಗ ಬೆಣ್ಣೆ ನಗರಿಗೆ ಕೊರೊನಾ ಸೋಂಕು ಹೇಗೆ ಬಂತು ಎಂಬುದು ಗೊತ್ತಾಗಲಿದೆ ಎಂದರು.
ಈಗ ಪಾಸಿಟಿವ್ ಬಂದಿರುವ ಪ್ರಕರಣಗಳು ಎಲ್ಲವೂ 533, 556ನೇ ಸೋಂಕಿತರ ಸಂಪರ್ಕದಲ್ಲಿದ್ದವರೇ. ಈ ಸೋಂಕಿತರ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕದಲ್ಲಿದ್ದವರಿಗೆ ಕೊರೊನಾ ಬಂದಿದೆ. ಹೊಸದಾಗಿ ಬೇರೆ ಕಡೆಗಳಲ್ಲಿ ಪ್ರಕರಣ ದೃಢಪಟ್ಟಿಲ್ಲ. ಹಾಗಾಗಿ ಜಾಲಿನಗರ, ಬಾಷಾನಗರ, ಇಮಾಮ್ ನಗರ ಸೇರಿದಂತೆ ಸೋಂಕಿತರ ಪ್ರದೇಶದಲ್ಲಿ ಹೆಚ್ಚಿನ ನಿಗಾ ವಹಿಸಲಾಗುವುದು. ಸೋಂಕು ಹರಡದಂತೆ ಮತ್ತಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
12 ಪ್ರಕರಣಗಳು ಸೋಂಕಿತರ ಅಕ್ಕಪಕ್ಕದ ಮನೆಯವರಾಗಿದ್ದು, ಜೊತೆಯಾಗಿ ಓಡಾಡಿದವರಾಗಿದ್ದಾರೆ. ಬೇರೆ ಪ್ರದೇಶಗಳಲ್ಲಿ ಕೊರೊನಾ ದೃಢಪಟ್ಟಿಲ್ಲ ಎಂದು ಹೇಳಿದರು. 662ನೇ ಸಂಖ್ಯೆಯ ಕೊರೊನಾ ಪೀಡಿತ ಮಹಿಳೆ ಸಾವನ್ನಪ್ಪಿದ್ದಾರೆ. ಮೇ. 2ರಂದು ಮಹಿಳೆ ಆಸ್ಪತ್ರೆಗೆ ದಾಖಲಾಗಿದ್ದರು. ಇಂದು ಕೊರೊನಾ ವರದಿ ಪಾಸಿಟಿವ್ ಬಂದಿದ್ದು, ಬೆಳಿಗ್ಗೆ 50 ವರ್ಷದ ಮಹಿಳೆಯು ವೈರಲ್ ನ್ಯುಮೋನಿಯಾ, ಕಾರ್ಡಿಯಲ್ ಅಟ್ಯಾಕ್ನಿಂದ ಬಳಲುತ್ತಿದ್ದರು. ಇನ್ನು 95ರ ಸ್ಯಾಂಪಲ್ಅನ್ನು ಕಳುಹಿಸಲಾಗಿದ್ದು, 232ರ ಸ್ಯಾಂಪಲ್ ವರದಿ ಬರಬೇಕಿದೆ. ಜನರು ದಯವಿಟ್ಟು ಮನೆಯೊಳಗೆ ಇರಿ. ಹೊರಗೆ ಬರಬೇಡಿ. ನಗರಕ್ಕೆ ಮಾರಕ ಆಗಬೇಡಿ ಎಂದು ಮನವಿ ಮಾಡಿದರು.