ದಾವಣಗೆರೆ: ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೊರೊನಾ ಪಾಸಿಟಿವ್ ಬಂದ 18 ವರ್ಷದ ಯುವತಿ ಸದ್ಯದಲ್ಲಿಯೇ ಗುಣಮುಖರಾಗಲಿದ್ದು, ಜೆಜೆಎಂ ಮೆಡಿಕಲ್ ಕಾಲೇಜಿನ ತಜ್ಞ ವೈದ್ಯರು ಈಕೆಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ.
ಶ್ವಾಸಕೋಶದ ಹಾಗೂ ಹೃದಯ ಸಂಬಂಧಿ ಕಾಯಿಲೆಗೆ ತುತ್ತಾಗಿದ್ದ ಯುವತಿ ಏಪ್ರಿಲ್ 30 ರಂದು ಸಿಜೆ ಆಸ್ಪತ್ರೆಗೆ ದಾಖಲಾಗಿದ್ದಳು. ಮೇ 1 ರಂದು ಆಕೆಗೆ ಕೊರೊನಾ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಮೊದಲೇ ಗಂಭೀರ ಸಮಸ್ಯೆಯಿಂದ ಬಳಲುತ್ತಿದ್ದ ಈಕೆಗೆ ಆಕ್ಸಿಜನ್ ಥೆರಪಿ ಬಳಿಕವೂ ರಕ್ತದಲ್ಲಿ ಶೇ 70ರಷ್ಟು ಸ್ಯಾಚುರೇಷನ್ ಇತ್ತು. ಈಕೆಯನ್ನು ಉಳಿಸಲು ವೈದ್ಯರ ತಂಡ ಐಸಿಯುವಿನಲ್ಲಿಟ್ಟು ಮೇ 5 ರಂದು ಪಾಶ್ಚಿಮಾತ್ಯ ದೇಶಗಳಲ್ಲಿ ನೀಡುವ ಹೈಪ್ಲೋ ಆಕ್ಸಿಜನ್ ಜೊತೆಗೆ ಔಷದೋಪಚಾರ, ಹೃದಯ ಸಂಬಂಧಿ ರೋಗಕ್ಕೂ ಸಹ ಸೂಕ್ತ ಚಿಕಿತ್ಸೆ ನೀಡಿದ್ದಾರೆ.
ಈಗ ಈ ಯುವತಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದು, ಎದ್ದು ಓಡಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈಕೆಯನ್ನು ವಾರ್ಡ್ಗೆ ಶಿಫ್ಟ್ ಮಾಡಲಾಗುವುದು. ಎಂಥಹ ಗಂಭೀರ ಸಮಸ್ಯೆ ಎದುರಾದರೂ ಎದುರಿಸುವ ತಜ್ಞ ವೈದ್ಯರ ತಂಡ ಇದ್ದು, ಯಾರೂ ಆತಂಕಪಡುವ ಅಗತ್ಯ ಇಲ್ಲ. ಆದಷ್ಟು ಬೇಗ ಈಕೆ ಗುಣಮುಖ ಹೊಂದಲಿದ್ದಾರೆ ಎಂದು ಜೆಜೆಎಂ ಮೆಡಿಕಲ್ ಕಾಲೇಜಿನ ಅನಸ್ತೇಷಿಯಾ ಮತ್ತು ಕ್ರಿಟಿಕಲ್ ಕೇರ್ನ ಮುಖ್ಯಸ್ಥ ಡಾ.ಕೆ. ರವಿ ಹಾಗೂ ಡಿಸಿ ಮಹಾಂತೇಶ್ ಆರ್. ಬೀಳಗಿ ಮಾಹಿತಿ ನೀಡಿದರು.
ಇನ್ನು ಶೇಕಡಾ 80 ರಷ್ಟು ಕೊರೊನಾ ಸೋಂಕಿತರು ವಾಸಿಯಾಗ್ತಾರೆ. ಉಳಿದ ಶೇಕಡಾ 20 ರಲ್ಲಿ ಶೇ 15 ರಷ್ಟು ಮಂದಿಯನ್ನು ಆಕ್ಸಿಜನ್ ಥರೆಪಿ ಮೂಲಕ ಗುಣಪಡಿಸಬಹುದು. ವೃದ್ಧರಲ್ಲಿ ಡಯಾಬಿಟಿಸ್, ಹೃದ್ರೋಗ ಸೇರಿದಂತೆ ಇತರೆ ರೋಗಗಳಿಂದ ಬಳಲುತ್ತಿರುವವರಿಗೆ ವೆಂಟಿಲೇಟರ್ ಅವಶ್ಯಕತೆ ಇರುತ್ತದೆ. ಆದ ಕಾರಣ ಜನರು ಕೊರೊನಾ ಬಗ್ಗೆ ಭಯ ಬೀಳುವುದು ಬೇಡ ಎಂದು ಡಾ.ಕೆ. ರವಿ ರವಿ ಹೇಳಿದರು.