ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 651ಕ್ಕೆ ಏರಿದೆ. ಇದರೊಟ್ಟಿಗೆ ಕರ್ತವ್ಯ ನಿರತ ಪೊಲೀಸ್ ಪೇದೆಯಲ್ಲೂ ಸೋಂಕು ದೃಢಪಟ್ಟಿದ್ದು, ಪೊಲೀಸ್ ಪೇದೆಯ ಸಂಪರ್ಕದಲ್ಲಿದ್ದ ವ್ಯಕ್ತಿಗಳನ್ನು ಆರೋಗ್ಯಾಧಿಕಾರಿಗಳು ಶೋಧಿಸುತ್ತಿದ್ದಾರೆ. ಸೋಂಕಿತ ಬೇಗೂರು ಪೊಲೀಸ್ ಠಾಣೆಯ ಪೇದೆಯಾಗಿದ್ದು, ಪೊಲೀಸರಿಗೆ ಮಾಡಿದ ಸೋಂಕು ಪತ್ತೆ ಪರೀಕ್ಷೆಯಲ್ಲಿ ಸೋಂಕು ದೃಢಪಟ್ಟಿದೆ.
ರಾಜ್ಯದಲ್ಲಿ ಇಬ್ಬರು ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು 27 ಮಂದಿ ಬಲಿಯಾಗಿದ್ದಾರೆ. 321 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಇಂದು ಹೊಸದಾಗಿ 37 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ದಾವಣಗೆರೆಯಲ್ಲಿ 22, ಬೀದರ್ನಲ್ಲಿ 7 ಪ್ರಕರಣಗಳು ವರದಿಯಾಗಿವೆ. ರಾಜ್ಯಾದ್ಯಂತ ಒಟ್ಟು 25,684 ವ್ಯಕ್ತಿಗಳನ್ನು ನಿಗಾದಲ್ಲಿ ಇಡಲಾಗಿದೆ. ರಾಜ್ಯದಲ್ಲಿ ಇಂದು 4,295 ಮಾದರಿಗಳನ್ನು ಪರೀಕ್ಷೆಗೊಳಪಡಿಸಲಾಗಿದೆ.
ಉಚಿತ ಸಾರಿಗೆ ಸೌಲಭ್ಯ ಇನ್ನೂ ಎರಡು ದಿನಗಳ ವಿಸ್ತರಣೆ
ವಲಸೆ ಕಾರ್ಮಿಕರಿಗೆ ಉಚಿತ ಬಸ್ ಪ್ರಯಾಣ ಸೌಕರ್ಯವನ್ನು ಮುಂದಿನ ಎರಡು ದಿನಗಳ ಅವಧಿಗೆ ಸರ್ಕಾರವು ವಿಸ್ತರಿಸಿದೆ. ಈಗಾಗಲೇ 951 ಬಸ್ಗಳಲ್ಲಿ 30 ಸಾವಿರ ಜನರು ತಮ್ಮಊರುಗಳಿಗೆ ತೆರಳಿದ್ದಾರೆ. ಬೆಂಗಳೂರಿನಲ್ಲಿ ಈ ಕಾರ್ಯಕ್ಕಾಗಿ 550 ಬಸ್ಗಳು ಹಾಗೂ ಇತರ ನಗರಗಳಲ್ಲಿ 400 ಬಸ್ಗಳನ್ನು ಕಾಯ್ದಿರಿಸಲಾಗಿದೆ. ರಾಜಸ್ಥಾನ, ಬಿಹಾರ, ಒಡಿಶಾ ರಾಜ್ಯಗಳಿಗೆ ರೈಲು ಸೌಲಭ್ಯವನ್ನು ಸಹ ಒದಗಿಸಲಾಗಿದೆ.
ಖಾಸಗಿ ಮೆಡಿಕಲ್ ಕಾಲೇಜುಗಳಲ್ಲೂ ಕೋವಿಡ್ ಲ್ಯಾಬ್ಗಳು
ರಾಜ್ಯದಲ್ಲಿರುವ ಎಲ್ಲಾ ಖಾಸಗಿ ಮೆಡಿಕಲ್ ಕಾಲೇಜುಗಳು ಹಾಗೂ ಇಎಸ್ಐಸಿ ಮೆಡಿಕಲ್ ಕಾಲೇಜುಗಳಲ್ಲಿ ಕಡ್ಡಾಯವಾಗಿ ಕೋವಿಡ್ ಪರೀಕ್ಷಾರ್ಥವಾದ ಆರ್ಟಿ- ಪಿಸಿಆರ್ ಲ್ಯಾಬ್ಗಳನ್ನು ಪ್ರಾರಂಭಿಸಬೇಕೆಂದು ಸರ್ಕಾರವು ಅಧಿಸೂಚನೆಯನ್ನು ಹೊರಡಿಸಿದೆ.
ಕೊರೊನಾ ವಾರಿಯರ್ಸ್ ಮೃತಪಟ್ಟರೇ ಆತನ ಕುಟುಂಬಕ್ಕೆ ಮೂವತ್ತು ಲಕ್ಷ ಪರಿಹಾರ
ಕೊರೊನಾ ಪರಿಹಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಆಶಾ ಕಾರ್ಯಕರ್ತೆಯರು, ಪೊಲೀಸ್, ಪೌರಕಾರ್ಮಿಕರು ಸೇರಿದಂತೆ ಹಲವು ನೌಕರರು ದುರದೃಷ್ಟವಷಾತ್ ಮೃತಪಟ್ಟಲ್ಲಿ, ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯ ಮಾರ್ಗಸೂಚಿಗಳಂತೆ ಅವರ ಕುಟುಂಬಕ್ಕೆ ಮೂವತ್ತು ಲಕ್ಷ ಪರಿಹಾರ ನೀಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ.