ಬೆಂಗಳೂರು/ದಾವಣಗೆರೆ: ಪಕ್ಷದ ಕೋರ್ ಕಮಿಟಿ ಸಭೆ ಹಾಗೂ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಎರಡು ದಿನಗಳ ಕಾಲ ದಾವಣಗೆರೆ ಪ್ರವಾಸಕ್ಕೆ ತೆರಳುತ್ತಿದ್ದಾರೆ. ಅವರು ಮುಖ್ಯಮಂತ್ರಿಯಾದ ನಂತರ ನಡೆಯುತ್ತಿರುವ ಮೊದಲ ಕೋರ್ ಕಮಿಟಿ ಮತ್ತು ಕಾರ್ಯಕಾರಿಣಿ ಸಭೆ ಇದಾಗಿದೆ.
ಇಂದು ಮಧ್ಯಾಹ್ನ 2:00 ಗಂಟೆಗೆ ರಸ್ತೆ ಮಾರ್ಗದ ಮೂಲಕ ದಾವಣಗೆರೆ ಪ್ರವಾಸ ಕೈಗೊಳ್ಳಲಿರುವ ಬೊಮ್ಮಾಯಿ, ಸಂಜೆ 5.30 ಕ್ಕೆ ದಾವಣಗೆರೆಗೆ ತಲುಪಲಿದ್ದಾರೆ. ಸಂಜೆ 7 ಗಂಟೆಗೆ ನಗರದ ಹೊರವಲಯದಲ್ಲಿರುವ ಅಪೂರ್ವ ರೆಸಾರ್ಟ್ನಲ್ಲಿ ನಡೆಯಲಿರುವ ಕೋರ್ಕಮಿಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಭಾನುವಾರ ಬೆಳಗ್ಗೆ 9.30 ಕ್ಕೆ ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆಯ ಕಾಮಗಾರಿಗೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆವರೆಗೆ ತ್ರಿಶೂಲ್ ಕಲಾಭವನದಲ್ಲಿ ನಡೆಯಲಿರುವ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾತ್ರಿ 8 ಗಂಟೆಗೆ ದಾವಣಗೆರೆಯಿಂದ ಹೊರಡಲಿದ್ದು, ರಾತ್ರಿ 11.30ರ ಸುಮಾರಿಗೆ ಬೆಂಗಳೂರಿಗೆ ವಾಪಸಾಗಲಿದ್ದಾರೆ.
ಮಾಜಿ ಸಿಎಂ ಬಿಎಸ್ವೈ ಕೂಡ ಭಾಗಿ
ಶಿವಮೊಗ್ಗ ಪ್ರವಾಸದಲ್ಲಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಇಂದು ಸಂಜೆ 4.30 ಕ್ಕೆ ದಾವಣಗೆರೆಗೆ ತೆರಳಲಿದ್ದಾರೆ. ಸಂಜೆ 7 ಗಂಟೆಗೆ ನಡೆಯಲಿರುವ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇಂದು ರಾತ್ರಿ ಜಿಎಂಐಟಿ ಗೆಸ್ಟ್ ಹೌಸ್ನಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿರುವ ಬಿಎಸ್ವೈ ಮಧ್ಯಾಹ್ನ 12.30 ಕ್ಕೆ ಹೊರಟು ಸಂಜೆ 4 ಗಂಟೆಗೆ ಬೆಂಗಳೂರಿಗೆ ಬರಲಿದ್ದಾರೆ.