ದಾವಣಗೆರೆ: ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ ಮತ್ತು 20,000 ರೂ ಸಾವಿರ ದಂಡ ವಿಧಿಸಿ ಇಲ್ಲಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶಿಸಿತು. ಸಂತ್ರಸ್ತೆಯ ತಂದೆ ಡಿ.14ರಂದು ತಮ್ಮ ಮಗಳು ಕಾಣೆಯಾಗಿದ್ದಾಳೆ ಎಂದು ದಾವಣಗೆರೆ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಪೊಲೀಸರು ತನಿಖೆ ಕೈಗೊಂಡು ಬಾಲಕಿಯನ್ನು ಪತ್ತೆ ಮಾಡಿದ್ದರು. ದಾವಣಗೆರೆಯ ನಿವಾಸಿಯಾದ ಅಪರಾಧಿಯು ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ, ಶಿವಮೊಗ್ಗಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿರುವುದು ತನಿಖೆಯಲ್ಲಿ ಗೊತ್ತಾಗಿತ್ತು.
ಅಂದಿನ ತನಿಖಾಧಿಕಾರಿಯಾಗಿದ್ದ ಶಿಲ್ಪಾ ವೈ.ಎಸ್. ಅವರು ಪೋಕ್ಸೋ ಕಾಯಿದೆಯಡಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶ ಶ್ರೀಪಾದ್. ಎನ್ ಅವರು, ಸಾಕ್ಷ್ಯಾಧಾರಗಳನ್ನು ಆಧರಿಸಿ ಅಪರಾಧಿಗೆ ದಂಡಸಮೇತ ಜೈಲು ಶಿಕ್ಷೆ ವಿಧಿಸಿದ್ದಾರೆ. ಸಂತ್ರಸ್ತೆಗೆ ಸರ್ಕಾರದಿಂದ 5 ಲಕ್ಷ ರೂ ಪರಿಹಾರ ನೀಡುವಂತೆಯೂ ತೀರ್ಪಿನಲ್ಲಿ ತಿಳಿಸಿದ್ದಾರೆ. ಸಂತ್ರಸ್ತೆಯ ಪರವಾಗಿ ಸರ್ಕಾರಿ ವಕೀಲರಾದ ಸುನಂದಾ ಮಡಿವಾಳರ್ ವಾದ ಮಂಡಿಸಿದರು.
ಹಾವೇರಿ: ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಡಿ ಸ್ಥಳೀಯರು ವ್ಯಕ್ತಿಯೋರ್ವನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಘಟನೆ ರಾಣೆಬೆನ್ನೂರು ತಾಲೂಕಿನ ಅರೇ ಮಲ್ಲಾಪುರ ಗ್ರಾಮದಲ್ಲಿ ನಡೆದಿದೆ. ದೌರ್ಜನ್ಯಕ್ಕೊಳಗಾದ ಬಾಲಕಿಗೆ ರಾಣೆಬೆನ್ನೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಆರೋಪಿಯನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದರು. ರಾಣೆಬೆನ್ನೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇದನ್ನೂ ಓದಿ: ಅತ್ಯಾಚಾರ ಪ್ರಕರಣ ಸಾಬೀತು: ನೇಪಾಳ ಕ್ರಿಕೆಟಿಗ ಸಂದೀಪ್ ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ