ದಾವಣಗೆರೆ : ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಅಧಿಕಾರಿಗಳು ಎರಡು ಕೋಟಿ ವೆಚ್ಚದಲ್ಲಿ ಹಳೇ ದಾವಣಗೆರೆ ಭಾಗದ ಹೊಂಡದ ವೃತ್ತದ ಬಳಿ ಕಲ್ಯಾಣಿ ನಿರ್ಮಾಣ ಮಾಡಿದ್ದಾರೆ. ಈ ಕಲ್ಯಾಣಿಯನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಂಸದ ಜಿಎಂ ಸಿದ್ದೇಶ್ವರ್ ಉದ್ಘಾಟನೆ ಮಾಡಿದ್ದರು. ಆದರೆ ಉದ್ಘಾಟನೆಗೊಂಡು ಒಂದು ವರ್ಷ ಕಳೆದರೂ ಜನರ ಪ್ರವೇಶಕ್ಕೆ ಮುಕ್ತವಾಗಿಲ್ಲ. ಇದನ್ನು ನಿರ್ವಹಣೆ ಮಾಡಬೇಕಿದ್ದ ಗುತ್ತಿಗೆದಾರ ತನ್ನ ಬಿಲ್ ಪಡೆದು ಕಾಲ್ಕಿತ್ತಿದ್ದಾರೆ.
ಇಲ್ಲಿನ ಹಳೇ ದಾವಣಗೆರೆಯ ಹೊಂಡದ ವೃತ್ತದ ಬಳಿ ಹೈಟೆಕ್ ಕಲ್ಯಾಣಿ ನಿರ್ಮಾಣ ಮಾಡಲಾಗಿದೆ. ಉದ್ಘಾಟನೆ ಆಗಿದ್ದರೂ ಈ ಕಲ್ಯಾಣಿಯನ್ನು ಮಹಾನಗರ ಪಾಲಿಕೆಗೆ ಹಸ್ತಾಂತರ ಮಾಡಲಾಗಿಲ್ಲ. ಕಳೆದ ಒಂದು ವರ್ಷದಿಂದ ಕಲ್ಯಾಣಿಯನ್ನು ನಿರ್ವಹಣೆ ಮಾಡದ ಪರಿಣಾಮ ಯೋಜನೆ ಬಳಕೆಯಾಗುವ ಮುನ್ನವೇ ನೆನೆಗುದಿಗೆ ಬೀಳುವ ಹಂತಕ್ಕೆ ತಲುಪಿದೆ. ಇಂದು ಪರಿಸರ ಸಂರಕ್ಷಣಾ ವೇದಿಕೆಯ ಪದಾಧಿಕಾರಿಗಳು ಒಟ್ಟುಗೂಡಿ ಗಾಂಧಿ ಜಯಂತಿ ಪ್ರಯುಕ್ತ ಕಲ್ಯಾಣಿಯನ್ನು ಸ್ವಚ್ಛಗೊಳಿಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಪರಿಸರ ಸಂರಕ್ಷಣಾ ವೇದಿಕೆಯ ಪದಾಧಿಕಾರಿ ಗಿರೀಶ್ ದೇವರಮನೆ, ದಾವಣಗೆರೆ ಸ್ಮಾರ್ಟ್ ಸಿಟಿ ಯೋಜನೆ ಅಡಿಯಲ್ಲಿ ಕಲ್ಯಾಣಿಯನ್ನು ನಿರ್ಮಾಣ ಆಗಿದೆ. ಇದರ ಉದ್ಘಾಟನೆ ಆಗಿ ಒಂದು ವರ್ಷ ಕಳೆದಿದೆ. ಗುತ್ತಿಗೆದಾರನಿಗೂ ಹಣ ನೀಡಲಾಗಿದೆ. ಈ ಕಲ್ಯಾಣಿಯನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ಪಾಲಿಕೆಗೆ ಹಸ್ತಾಂತರ ಮಾಡಬೇಕಿತ್ತು. ಇನ್ನೂ ಕೂಡ ಹಸ್ತಾಂತರ ಮಾಡಲಾಲ್ಲ. ಇಲ್ಲಿ ಸ್ವಚ್ಛತೆಯನ್ನು ಕಾಪಾಡಲಾಗಿಲ್ಲ. ಎರಡು ಕೋಟಿಗೂ ಅಧಿಕ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಕೂಡಲೇ ಕಲ್ಯಾಣಿಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಹಂಪಿಯಲ್ಲಿರುವ ಸ್ಮಾರಕದ ರೀತಿಯಲ್ಲಿ ಈ ಕಲ್ಯಾಣಿಯನ್ನು ನಿರ್ಮಾಣ ಮಾಡಲಾಗಿದೆ. ಕಂಬಗಳ ಸಾಲಿನಿಂದ ಕೂಡಿರುವ ಸುಂದರವಾದ ಕಲ್ಯಾಣಿಯನ್ನು ಚೌಕಾಕಾರದಲ್ಲಿ ನಿರ್ಮಾಣ ಮಾಡಲಾಗಿದೆ. ಕಲ್ಯಾಣಿ ಮಧ್ಯೆ ನೀರಿನ ಕಾರಂಜಿಯನ್ನು ಅಳವಡಿಸಲಾಗಿದೆ. ಆದರೆ ನೀರಿಲ್ಲದೆ ಕಾರಂಜಿಯ ಮೋಟರ್ ಗಳು ಹಾಳಾಗಿವೆ. ಈ ಹಿಂದೆ ಈ ಸ್ಥಳದಲ್ಲಿ ಅನುಪಯುಕ್ತವಾಗಿದ್ದ ಹೊಂಡ ಇತ್ತು. ಈಗ ಹೊಂಡವನ್ನು ಕಲ್ಯಾಣಿ ರೀತಿ ಅಭಿವೃದ್ಧಿ ಮಾಡಲಾಗಿದೆ.
ಈ ಬಗ್ಗೆ ಸ್ಮಾರ್ಟ್ ಸಿಟಿ ಎಂಡಿ ಬಳಿ ಕೇಳಿದರೆ, ಸ್ಮಾರ್ಟ್ ಸಿಟಿ ಅಧಿಕಾರಿಗಳು ಪಾಲಿಕೆಗೆ ಹಸ್ತಾಂತರ ಮಾಡಲು ಸಿದ್ಧರಿದ್ದಾರೆ. ಸ್ಥಳೀಯ ಪಾಲಿಕೆ ಸದಸ್ಯ ಹಾಗು ಪಾಲಿಕೆಯವರು ಈ ಬಗ್ಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಇದಲ್ಲದೆ ಸಾಕಷ್ಟು ಕಾಮಗಾರಿಗಳು ಮುಗಿಸಲಾಗಿದೆ ಎಂದು ಹೇಳಿದರು.
ಸ್ಥಳೀಯರಾದ ರಾಘವೇಂದ್ರ ಪ್ರತಿಕ್ರಿಯಿಸಿ, ಹಳೇ ದಾವಣಗೆರೆಯಲ್ಲಿ ಅಪರೂಪಕ್ಕೆ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಇದ್ದ ಹೊಂಡವನ್ನು ಕಲ್ಯಾಣಿ ರೀತಿ ಮಾಡಿದ್ದಾರೆ. ತರಾತುರಿಯಲ್ಲಿ ಕಲ್ಯಾಣಿ ಉದ್ಘಾಟನೆ ಮಾಡಲಾಗಿದೆ. ಆದರೆ ಸರಿಯಾಗಿ ನಿರ್ವಹಣೆ ಮಾಡದೆ ಇರುವುದು ವಿಷಾದನೀಯ ಎಂದರು.
ಇದನ್ನೂ ಓದಿ : ಚಿಕ್ಕಮಗಳೂರಿನಲ್ಲಿ ಬೀದಿನಾಯಿ ಉಪಟಳ ಹೆಚ್ಚಳ: ದಾಳಿಗೊಳಗಾದವರೆಷ್ಟು ಗೊತ್ತಾ?