ದಾವಣಗೆರೆ: ಮಧ್ಯ ಕರ್ನಾಟಕದಲ್ಲಿ ಒಂದು ಪ್ರಕೃತಿ ಚಿಕಿತ್ಸೆ ನೀಡುವ ಆಯುಷ್ ಆಸ್ಪತ್ರೆ ಪ್ರಾರಂಭ ಆಗಬೇಕು ಎಂಬ ಕೂಗು ಮೊದಲಿನಿಂದಲು ಕೇಳುತ್ತಿತ್ತು. ಈ ಕೂಗಿಗೆ ಸರ್ಕಾರ ಮನ್ನಣೆ ನೀಡಿದ್ದು, ಆಯುಷ್ ಇಲಾಖೆಯ ಮೂಲಕ 50 ಹಾಸಿಗೆಗಳ ಸಂಯುಕ್ತ ಆಸ್ಪತ್ರೆ ಕಟ್ಟಡ ನಿರ್ಮಾಣಕ್ಕೆ ಹಣ ಮಂಜೂರು ಮಾಡಿದೆ.
ನಗರದ ನಾಗಮ್ಮ ಕೇಶವಮೂರ್ತಿ ಬಡಾವಣೆಯಲ್ಲಿ 50 ಹಾಸಿಗೆಗಳ ಸಂಯುಕ್ತ ಆಯುಷ್ ಆಸ್ಪತ್ರೆ ಕಟ್ಟಡದ ಶಂಕು ಸ್ಥಾಪನೆಯನ್ನು ಶಾಸಕ ಡಾ. ಶಾಮನೂರು ಶಿವಶಂಕರಪ್ಪ ನೆರವೇರಿಸಿದ್ದಾರೆ. ಇನ್ನು ಈ ಕಟ್ಟಡದಲ್ಲಿ ಆಯುರ್ವೇದ, ಹೋಮಿಯೋಪತಿ, ಯುನಾನಿ, ಯೋಗ ಈ ನಾಲ್ಕು ವಿಧಾನದ ಚಿಕಿತ್ಸೆ ನೀಡಲಾಗುತ್ತದೆ. ಮೂರು ವರ್ಷದ ಹಿಂದೆ ರಾಜ್ಯ ಸರ್ಕಾರ ಈ ಆಸ್ಪತ್ರೆ ಮಂಜೂರು ಮಾಡಿದ್ದು, ಕಳೆದ ವರ್ಷ ಆಡಳಿತಾತ್ಮಕ ಅನುಮೋದನೆ ನೀಡಿದೆ. ಒಟ್ಟು 7.5 ಕೋಟಿ ರೂ. ವೆಚ್ಚದಲ್ಲಿ ಆಸ್ಪತ್ರೆ ಕಟ್ಟಣ ನಿರ್ಮಾಣವಾಗಲಿದೆ.
ಶಾಸಕ ಡಾ. ಶಾಮನೂರು ಶಿವಶಂಕರಪ್ಪ ಮಾತನಾಡಿ, ಉತ್ತಮ ಆಸ್ಪತ್ರೆಗಳಿಂದಾಗಿ ಮನುಷ್ಯನ ಆಯುಷ್ಯ ಹೆಚ್ಚಾಗಿದೆ. ಆಯುರ್ವೇದ ಚಿಕಿತ್ಸಾ ಪದ್ದತಿ ಕಡೆಗೆ ಜನರ ಒಲವು ಹೆಚ್ಚುತ್ತಿದೆ. ಚಿಕಿತ್ಸೆ ಜೊತೆಗೆ ವಿರಾಮ ಪಡೆದು ಬರುತ್ತಿದ್ದಾರೆ. ಇನ್ಮುಂದೆ ದಾವಣಗೆರೆಯಲ್ಲೆ ಈ ಸೌಲಭ್ಯ ಸಿಗಲಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ಪ್ರಕೃತಿ ಮಡಿಲಲ್ಲಿರುವ ಈ ಜಾಗ ಪ್ರಕೃತಿಯ ಚಿಕಿತ್ಸೆಗೆ ಉತ್ತಮವಾಗಿದೆ. ನಮ್ಮ ಜನರು ಪ್ರಕೃತಿ ಚಿಕಿತ್ಸೆಗೆಂದು ಉಜಿರೆ, ಧರ್ಮಸ್ಥಳ ಇನ್ನಿತರ ಸ್ಥಳಗಳಿಗೆ ಹೋಗಿ ಬರುತ್ತಾರೆ. ಆದರೆ ಇನ್ನು ಮುಂದೆ ಮಧ್ಯ ಕರ್ನಾಟಕ ದಾವಣಗೆರೆಯಲ್ಲಿಯೇ ಈ ಚಿಕಿತ್ಸೆ ಸಿಗಲಿದೆ ಎಂದು ಹೇಳಿದರು.