ದಾವಣಗೆರೆ: ಕೊರೊನೊ ವೈರಸ್ ಸೋಂಕು ಭೀತಿ ಹಿನ್ನೆಲೆಯಲ್ಲಿ ಊರಿಗೆ ಯಾರೂ ಪ್ರವೇಶ ಮಾಡದಂತೆ ಗ್ರಾಮಸ್ಥರೇ ಮುಳ್ಳು, ಕೇಜ್ ವ್ಹೀಲ್ ಸೇರಿದಂತೆ ಇತರೆ ವಸ್ತುಗಳನ್ನು ಹಾಕಿರುವ ಘಟನೆ ನಗರದ ಹೊಸಕುಂದುವಾಡ ಗ್ರಾಮದಲ್ಲಿ ನಡೆದಿದೆ.
ದಾವಣಗೆರೆ ಮಹಾನಗರ ಪಾಲಿಕೆ ವ್ಯಾಪ್ತಿಗೆ ಬರುವ ಈ ಗ್ರಾಮಕ್ಕೆ ಹೊರಗಿನಿಂದ ಬರುವವರಿಗೆ ಪ್ರವೇಶ ನಿರಾಕರಿಸಲಾಗಿದೆ. ಮಾತ್ರವಲ್ಲ, ಮನೆಯಿಂದ ಹೊರಬಾರದು ಎಂಬ ಸೂಚನೆ ಕೊಡಲಾಗುತ್ತಿದೆ. ಗ್ರಾಮ ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಬಂದ್ ಮಾಡಲಾಗಿದೆ. ಗ್ರಾಮದ ಯುವಕರೆಲ್ಲರೂ ಸ್ವಯಂಪ್ರೇರಿತರಾಗಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

ಜಿಲ್ಲೆಯ ಜಗಳೂರು ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಚಟ್ನಹಳ್ಳಿ, ಉಚ್ಚಂಗಿಪುರ, ದಿದ್ದಿಗಿ, ಹಿರೆಮಲ್ಲನಹೊಳೆ ಗ್ರಾಮಗಳ ಮುಖ್ಯ ರಸ್ತೆಗಳನ್ನು ಗ್ರಾಮಸ್ಥರೇ ಬಂದ್ ಮಾಡಿದ್ದಾರೆ. ಕೊರೊನೊ ತಡೆಗಟ್ಟಲು ಗ್ರಾಮಸ್ಥರು ತಾವೇ ಖುದ್ದಾಗಿ ರಸ್ತೆಗಳಲ್ಲಿ ಮುಳ್ಳು, ತಂತಿ ಬೇಲಿ ಹಾಕುತ್ತಿದ್ದಾರೆ. ಊರಿನಿಂದ ಹೊರ ಹೋದವರು ಮತ್ತೆ ಗ್ರಾಮಕ್ಕೆ ಬರಬಾರದು ಎಂಬ ಕಾರಣಕ್ಕೆ ಈ ನಿರ್ಧಾರಕ್ಕೆ ಬಂದಿದ್ದಾರೆ.