ದಾವಣಗೆರೆ: ಮಹಾನಗರ ಪಾಲಿಕೆಯ ಕಂದಾಯ ಪರಿಷ್ಕರಣೆ ಕೈಬಿಟ್ಟು ಹಿಂದಿನ ಕಂದಾಯವನ್ನೇ ಪರಿಗಣಿಸಬೇಕೆಂದು ಒತ್ತಾಯಿಸಿ ಪಾಲಿಕೆ ಪ್ರತಿಪಕ್ಷ ಕಾಂಗ್ರೆಸ್ ಸದಸ್ಯರು ಮೌನ ಪ್ರತಿಭಟನೆ ನಡೆಸಿದರು.
ಪ್ರತಿಪಕ್ಷ ನಾಯಕ ಎ. ನಾಗರಾಜ್ ನೇತೃತ್ವದಲ್ಲಿ ಪಾಲಿಕೆ ಎದುರು ಮೌನ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ಸದಸ್ಯರು ಆಯುಕ್ತರಿಗೆ ಮನವಿ ಸಲ್ಲಿಸಿದರು. ಕೋವಿಡ್-19 ಸಂಕಷ್ಟದಿಂದ ಕಳೆದ 2 ತಿಂಗಳ ಕಾಲ ದಾವಣಗೆರೆ ಸ್ಥಬ್ದಗೊಂಡಿದೆ. ಯಾವುದೇ ವ್ಯಾಪಾರ ವಹಿವಾಟು ನಡೆದಿಲ್ಲ. 2 ತಿಂಗಳುಗಳ ಕಾಲ ಜನ ಲಾಕ್‍ಡೌನ್, ಜನತಾ ಕರ್ಫ್ಯೂಗೆ ಸಿಲುಕಿ ನಲುಗಿ ಹೋಗಿದ್ದಾರೆ.
ಇಂತಹ ಸಂಕಷ್ಟದ ಸಮಯದಲ್ಲಿ ಜಿಲ್ಲಾಧಿಕಾರಿ ಈ ಹಿಂದೆ ಮಾಡಿದ ನಿರ್ಣಯದಿಂದ ಮಹಾನಗರದ ಜನತೆಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಆರೋಪಿಸಿದರು. ಪಾಲಿಕೆಯಲ್ಲಿ ಪ್ರತಿ ಮೂರು ವರ್ಷಗಳಿಗೊಮ್ಮೆ ಕಂದಾಯ ಪರಿಷ್ಕರಣೆಯನ್ನು ಪಾಲಿಕೆಯ ಸರ್ವ ಸದಸ್ಯರ ಸಭೆಯಲ್ಲಿ ಈ ವಿಚಾರವನ್ನು ಮಂಡಿಸಿ, ಚರ್ಚಿಸಿ, ಜನ ಸಾಮಾನ್ಯರಿಗೆ ಹೊರೆ ಆಗದಂತೆ ಹಾಗೂ ಸರ್ಕಾರಕ್ಕೂ ಸೂಕ್ತ ಕಂದಾಯ ಬರುವ ರೀತಿಯಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿತ್ತು. ಆದ್ರೆ ಈಗ ಏಕಾಏಕಿಯಾಗಿ ಕಂದಾಯ ಹೆಚ್ಚಿಸಿರುವುದು ಸರಿಯಲ್ಲ ಎಂದರು.
ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಮತ್ತು ರಿಸರ್ವ್ ಬ್ಯಾಂಕುಗಳಿಂದ ಸಹಕಾರ ಸಂಘಗಳಿಂದ ಸಾಲದ ಬಾಕಿ ಕಟ್ಟಲು 6 ತಿಂಗಳ ವಿರಾಮ ಘೋಷಿಸಿದೆ. ಇಂತಹ ಸಂದರ್ಭದಲ್ಲಿ ಪಾಲಿಕೆ ತೆಗೆದುಕೊಂಡಿರುವ ತೀರ್ಮಾನ ನಗರದ ಜನತೆಗೆ ಶಾಪವಾಗಿ ಪರಿಣಮಿಸಿದ್ದು, ಈ ಕೂಡಲೇ ಕಂದಾಯ ಪರಿಷ್ಕರಣೆಯನ್ನು ಕೈ ಬಿಟ್ಟು ಹಳೆ ಕಂದಾಯವನ್ನು ಪಾವತಿಸಲು ಅನುಮತಿ ನೀಡಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಕೆಪಿಸಿಸಿ ಮಾಧ್ಯಮ ವಿಶ್ಲೇಷಕರಾದ ಡಿ.ಬಸವರಾಜ್, ಸದಸ್ಯರಾದ ದೇವರಮನೆ ಶಿವಕುಮಾರ್, ಜಿ.ಎಸ್.ಮಂಜುನಾಥ್, ಜೆ. ಎನ್. ಶ್ರೀನಿವಾಸ್, ಅಬ್ದುಲ್ ಲತೀಫ್, ಪಾಮೇನಹಳ್ಳಿ ನಾಗರಾಜ್, ವಿನಾಯಕ ಪೈಲ್ವಾನ್, ಜಿ.ಡಿ.ಪ್ರಕಾಶ್, ಜಾಕೀರ್ ಅಲಿ, ಮೊಹ್ಮದ್ ಕಬೀರ್ ಅಲಿ, ಸೈಯದ್ ಚಾರ್ಲಿ, ಎ.ಬಿ.ರಹೀಂ ಸೇರಿದಂತೆ ಇತರೆ ಕೈ ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.