ದಾವಣಗೆರೆ: ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹಾಗು ಅವರ ಪುತ್ರ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವಿರುದ್ಧ ಕಾಂಗ್ರೆಸ್ ಮುಖಂಡ ಹದಡಿ ಹಾಲಪ್ಪ ತುಂಬಿದ ವೇದಿಕೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ.
ದಾವಣಗೆರೆ ತಾಲೂಕಿನ ಕೊಂಡಜ್ಜಿ ರಸ್ತೆಯ ಕರೂರು ಶಿವಪುರ ಚೌಡೇಶ್ವರಿ ದೇವಾಲಯ ಬಳಿ ಹಮ್ಮಿಕೊಂಡಿದ್ದ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಅಭಿನಂದನಾ ಕಾರ್ಯಕ್ರಮದಲ್ಲಿ ತರಾಟೆಗೆ ತೆಗೆದುಕೊಂಡರು. ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಕೈ ಮುಖಂಡ ಹಾಗು ಮಾಜಿ ಎಪಿಎಂಸಿ ಸದಸ್ಯ ಹದಡಿ ಹಾಲಪ್ಪ ಅವರು ಪಕ್ಷದ ನಾಯಕರ ನಡೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
'ಮಲ್ಲಿಕಾರ್ಜುನ್ ತಮ್ಮನ್ನು ಎಪಿಎಂಸಿ ಅಧ್ಯಕ್ಷನನ್ನಾಗಿ ಮಾಡಲಿಲ್ಲ. ತನಗೆ ಬೇಕಾದವರನ್ನ ಮಾಡಿದ್ದಾನೆ. ಮತ್ತೆ ತನಗೆ ವೋಟ್ ಹಾಕಲಿಲ್ಲ ಎಂದು ಕೇಳುತ್ತಾನೆ. ಆದರೆ ಆತನ ಮನೆಯ ಅಕ್ಕಪಕ್ಕದವರೆ ಮಲ್ಲಿಕಾರ್ಜುನ್ಗೆ ವೋಟ್ ಹಾಕಿಲ್ಲ. 2018 ರಲ್ಲಿ ಶಾಮನೂರು ಶಿವಶಂಕರಪ್ಪನವರು ಗೆದ್ದಾಗ ಹದಡಿ ಗ್ರಾಮದಿಂದ ಹೂವಿನ ಹಾರ ಹಾಕಿ ಅಭಿನಂದನೆ ಸಲ್ಲಿಸಲು ಮನೆಗೆ ತೆರಳಿದ್ದೆ. ಆಗ ನಮ್ಮನ್ನು ನೋಡಿದ ಶಾಮನೂರು ಶಿವಶಂಕರಪ್ಪ ನನ್ನ ಮಗನನ್ನ ಸೋಲಿಸಿದ್ದೀರಿ.. ಯಾರು ಮತ ಹಾಕಿಲ್ಲ ಎಂದು ಅವಾಚ್ಯ ಶಬ್ದಗಳಿಂದ ನನ್ನನ್ನು ಬೈದಿದ್ದರು. ಅಂದೇ ನಾನು ತಿರುಗಿಸಿ ಬೈಯುತ್ತಿದ್ದೆ. ಅವರು ವಯಸ್ಸಿನಲ್ಲಿ ದೊಡ್ಡವರು ಎಂದು ಸುಮ್ಮನಾದೆ' ಎಂದರು.
ಇಂದು ಅಪ್ಪ-ಮಕ್ಕಳು ನಮ್ಮ ಸಮುದಾಯದವರಿಗೆ ಜಿಲ್ಲೆಯಲ್ಲಿ ಯಾವುದೇ ಸ್ಥಾನವನ್ನು ನೀಡಿಲ್ಲ. ಎಲ್ಲವನ್ನು ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳುತ್ತಿದ್ದಾರೆ. ಇದರಿಂದ ನಮ್ಮಂತವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಅನ್ಯಾಯವಗಾಗುತ್ತಿದೆ ಎಂದು ಸಭೆಯಲ್ಲಿ ಕಾಂಗ್ರೆಸ್ ಮುಖಂಡ ಹದಡಿ ಹಾಲಪ್ಪ ತೀವ್ರ ಅಸಮಾಧಾನ ಹೊರಹಾಕಿದರು.