ದಾವಣಗೆರೆ: ಕಾಂಗ್ರೆಸ್ ಪಕ್ಷದ ಆಂತರಿಕ ಜಗಳ ಹಾಗೂ ಸಿಎಂ ಯಡಿಯೂರಪ್ಪರ ಜನಪ್ರಿಯತೆಯಿಂದ ಬಿಜೆಪಿ ಉಪಚುನಾವಣೆಯಲ್ಲಿ ಗೆಲ್ಲಲು ಸಹಕಾರಿಯಾಗಲಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅಭಿಪ್ರಾಯಪಟ್ಟಿದ್ದಾರೆ.
ನಗರದ ಜಿಎಂಐಟಿ ಕಾಲೇಜಿನ ಗೆಸ್ಟ್ ಹೌಸ್ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ರಾಣೆಬೆನ್ನೂರು, ಹಿರೇಕೆರೂರು ಉಪಚುನಾವಣೆಯಲ್ಲಿ ನಾನು ತೊಡಗಿಸಿಕೊಂಡಿದ್ದೇನೆ. ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ನಿಶ್ಚಿತ ಎಂದು ಹೇಳಿದರು.
ನಾಮಪತ್ರ ಸಲ್ಲಿಕೆಯಾದ ಬಳಿಕ 15 ಕ್ಷೇತ್ರಗಳಲ್ಲೂ ಬಿಜೆಪಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. 15 ಕ್ಷೇತ್ರಗಳಲ್ಲೂ ಗೆಲುವು ನಮ್ಮದೇ ಎಂದರು.
ಜಿ. ಟಿ. ದೇವೇಗೌಡ ಅವರೊಬ್ಬ ಮುತ್ಸದ್ದಿ ರಾಜಕಾರಣಿ. ಹಿಂದೆ ಬಿಜೆಪಿಯಲ್ಲಿ ಇದ್ದವರು. ಯಾವ ಸಂದರ್ಭದಲ್ಲಿ ಏನು ತೀರ್ಮಾನ ತೆಗೆದುಕೊಳ್ಳಬೇಕು ಎಂಬುದು ಅವರಿಗೆ ಗೊತ್ತಿದೆ. ಜಿಟಿಡಿ ಉಪಚುನಾವಣೆಯಲ್ಲಿ ತಟಸ್ಥವಾಗಿರುತ್ತೇನೆ ಎಂಬ ನಿರ್ಧಾರ ಗೌರವಿಸುತ್ತೇನೆ ಎಂದ ಅವರು, ಹುಣಸೂರು ಕ್ಷೇತ್ರದಲ್ಲಿ ಎಚ್. ವಿಶ್ವನಾಥ್ ಅತ್ಯಧಿಕ ಮತಗಳಿಂದ ಗೆಲುವು ಸಾಧಿಸುತ್ತಾರೆ ಎಂದು ಭವಿಷ್ಯ ನುಡಿದರು.
ಕಲಬುರಗಿಯಲ್ಲಿ ಸೇವಾಲಾಲ್ ಮರಿಯಮ್ಮ ತೆರವುಗೊಳಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಿಎಂ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಸಂಪೂರ್ಣ ವರದಿ ಪಡೆಯುತ್ತಿದ್ದಾರೆ. ಅದನ್ನು ಸರಿಪಡಿಸುತ್ತಾರೆ ಎಂಬ ವಿಶ್ವಾಸ ಇದೆ ಎಂದು ಹೇಳಿದರು.
ಜೆಡಿಎಸ್ ಕೋತಿಗಳು ಇದ್ದಂತೆ ಎಂಬ ಮಾಜಿ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿಕೆಗೆ ನಾನು ಹೇಗೆ ಉತ್ತರಿಸಲಿ. ಅದಕ್ಕೆ ಜೆಡಿಎಸ್ನವರೇ ಉತ್ತರಿಸಲಿ. ಇಲ್ಲದಿದ್ದರೆ ಪರಮೇಶ್ವರ್ ಹೇಳಿದ್ದು ಸತ್ಯವಾಗುತ್ತದೆ ಎಂದಿದ್ದಾರೆ.