ದಾವಣಗೆರೆ: ಸಿದ್ದರಾಮಯ್ಯ ಒಬ್ಬ ವಲಸಿಗ, ಜೆಡಿಎಸ್ ತುಳಿದು, ಒದ್ದು, ಗುರು ದೇವೇಗೌಡರನ್ನು ಅಡ್ಡಹಾಕಿ ಕಾಂಗ್ರೆಸ್ ಹೋಗಿದ್ದಾರೆ. ಅವರು ಕೂಡ ಒಬ್ಬ ವಲಸಿಗ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು. ದಾವಣಗೆರೆ ನಗರದ ಶೇಖರಪ್ಪ ನಗರದಲ್ಲಿ ಜರುಗಿದ ವಿಜಯ್ ಸಂಕಲ್ಪ ಅಭಿಯಾನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
70 ಶಾಸಕರು ಬೊಮ್ಮಾಯಿಯವರು ನೇತೃತ್ವದಲ್ಲಿ ಚುನಾವಣೆಗೆ ಹೋಗಲ್ಲ, ಬಿಎಸ್ವೈಯವರ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದು ಪತ್ರ ಬರೆದಿರುವುದು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಈ ವಿಚಾರದ ಬಗ್ಗೆ ನನಗೆ ಗೊತ್ತಿಲ್ಲ, ಅದು ಹೈಕಮಾಂಡ್ ನೋಡಿಕೊಳ್ಳತ್ತದೆ. ಮುಂದಿನ ಚುನಾವಣೆಯನ್ನು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ ಎಂದರು.
ವಲಸೆ ಬಿಜೆಪಿ ಸಚಿವರನ್ನು ಮೂಲ ಬಿಜೆಪಿಗರು ಸಪೋರ್ಟ್ ಮಾಡ್ತಿದ್ದೇವೆ: ವಲಸೆ ಬಿಜೆಪಿ ಸಚಿವರ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ನಿರಂತರವಾಗಿ ವಾಗ್ದಾಳಿ ನಡೆಸುತ್ತಿದ್ದರು. ಈ ಬಗ್ಗೆ ಮೂಲ ಬಿಜೆಪಿಗರು ಮಾತನಾಡುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಸಿದ್ದರಾಮಯ್ಯ ಒಬ್ಬ ವಲಸಿಗ, ಜೆಡಿಎಸ್ ತುಳಿದು, ಒದ್ದು, ಗುರು ದೇವೇಗೌಡರನ್ನು ಅಡ್ಡಹಾಕಿ ಕಾಂಗ್ರೆಸ್ ಹೋಗಿದ್ದಾರೆ. ಇದೀಗ ಕಾಂಗ್ರೆಸ್ ಹೋಗಿ ಕಾಂಗ್ರೆಸ್ ಪಕ್ಷವನ್ನು ಮುಗಿಸುತ್ತಿದ್ದಾರೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನೇ ವಲಸಿಗ ಎಂದರು. ಇನ್ನು ಮೂಲ ಬಿಜೆಪಿಗರು ವಲಸಿಗ ಬಿಜೆಪಿ ಸಚಿವರಿಗೆ ಸಹಕರಿಸುತ್ತಿಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ವಲಸೆ ಬಿಜೆಪಿ ಸಚಿವರಿಗೆ ನಮ್ಮ ಪಕ್ಷದಲ್ಲಿ ಏನ್ ಕಡಿಮೆ ಮಾಡಿದ್ದೇವೆ. ಎಲ್ಲರೂ ಸಪೋರ್ಟ್ ಮಾಡ್ತಿದ್ದೇವೆ ಎಂದರು.
ಒಂದು ಮತಕ್ಕೆ ಆರು ಸಾವಿರ ಬಗ್ಗೆ ಕಟೀಲ್ ಪ್ರತಿಕ್ರಿಯೆ: ಕಾರ್ಯಕ್ರಮವೊಂದರಲ್ಲಿ ಮಾಜಿ ಸಚಿವ ರಮೇಶ್ ಜಾರಕಿ ಹೋಳಿ ಅವರು ಪ್ರತಿ ಒಂದು ಮತಕ್ಕೆ 6 ಸಾವಿರ ಹಂಚುತ್ತೇವೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಚುನಾವಣೆಯಲ್ಲಿ ಹಣ ಹಂಚಿರುವುದರ ಬಗ್ಗೆ ಹೇಳಿರೋದು, ಹಣ ಹಂಚುವ ಸಂಸ್ಕೃತಿ ಕಾಂಗ್ರೆಸ್ ಪಕ್ಷದ್ದು ಎಂದರು. ದಲಿತ ಸಿಎಂ ಬಗ್ಗೆ ಪ್ರತಿಕ್ರಿಯಿಸಿದ ಅವರು ದಲಿತ ಮುಖ್ಯಮಂತ್ರಿ ಮಾಡಬೇಕೆಂಬ ಚರ್ಚೆಯನ್ನು ಹುಟ್ಟಿಹಾಕಿದ್ದು, ದಲಿತರನ್ನು ಸಿಎಂ ಆಗದಂತೆ ನೋಡಿಕೊಂಡಿದ್ದು ಸಿದ್ದರಾಮಯ್ಯ ಅವರೇ ಎಂದು ತಿರುಗೇಟು ನೀಡಿದರು.
ನಳೀನ್ ಕುಮಾರ್ ಕಟೀಲ್ಗೆ ದೂರವಾಣಿ ಕರೆ: ಮಾಧ್ಯಮದವರೊಂದಿಗೆ ಮಾತನಾಡುವ ವೇಳೆ ತಮ್ಮ ಮೊಬೈಲ್ಗೆ ದೂರವಾಣಿ ಕರೆ ಬಂದದ್ದನ್ನು ಮಾಧ್ಯಮದವರಿಗೆ ತೋರಿಸಿ ಸದ್ಯದಲ್ಲೇ ಕಾಂಗ್ರೆಸ್ ಮನೆ ಖಾಲಿ ಆಗುತ್ತೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೊಸ ಬಾಂಬ್ ಸಿಡಿಸಿದರು. ಇನ್ನು ಬಿಬಿಸಿ ಅಂತಾರಾಷ್ಟ್ರೀಯ ವಾಹಿನಿ ಮೋದಿ ಅವರ ಗೋದ್ರಾ ಹತ್ಯಾಕಾಂಡದ ಬಗ್ಗೆ ಡಾಕ್ಯುಮೆಂಟ್ರಿ ಭಾರತದಲ್ಲಿ ಪ್ರದರ್ಶನಗೊಳ್ಳುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ನಳೀನ್ ಕುಮಾರ್ ಕಟೀಲ್ ಯಾವುದೇ ಉತ್ತರ ನೀಡದೇ ಮೌನವಹಿಸಿದರು.
ಇದನ್ನೂ ಓದಿ:ಸಚಿವರಾಗಲು ಸಿದ್ದರಾಮಯ್ಯ ಸರ್ಟಿಫಿಕೇಟ್ ಬೇಕಿಲ್ಲ: ಸಚಿವ ಸುಧಾಕರ್