ದಾವಣಗೆರೆ: ಮಹಾನಗರ ಪಾಲಿಕೆಯಲ್ಲಿ ಬಿಜೆಪಿ ಎಷ್ಟೇ ಕುತಂತ್ರ ಮಾಡಿದರೂ ಮೇಯರ್ ಪಟ್ಟ ಸಿಗುವುದಿಲ್ಲ. ನಮ್ಮ ಪಕ್ಷದವರೇ ಮೇಯರ್ ಆಗಲಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಹೆಚ್. ಬಿ. ಮಂಜಪ್ಪ ಹೇಳಿದರು.
ಇಂದು ನಗರದಲ್ಲಿ ನಡೆದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಾರ್ಪೊರೇಟರ್ಗಳನ್ನು ಸೆಳೆಯಲು ಬಿಜೆಪಿ ಹವಣಿಸುತ್ತಿದೆ ಎಂದು ಆರೋಪಿಸಿದರು. ಹಣದ ಆಮಿಷಕ್ಕೆ ನಮ್ಮವರ್ಯಾರು ಒಳಗಾಗುವುದಿಲ್ಲ. ಎಲ್ಲರೂ ಒಟ್ಟಾಗಿದ್ದಾರೆ. ಮುಂಬಾಗಿಲ ರಾಜಕಾರಣ ಬಿಟ್ಟು ಹಿಂಬಾಗಿಲ ರಾಜಕಾರಣವನ್ನು ಬಿಜೆಪಿ ಮಾಡುತ್ತಿದೆ. ಆ ಪಕ್ಷದ ರಾಜ್ಯ ನಾಯಕರೇ ಈ ರೀತಿ ರಾಜಕಾರಣ ಮಾಡುತ್ತಿದ್ದಾರೆ. ಇನ್ನು ಸ್ಥಳೀಯರು ಇದನ್ನು ಪಾಲಿಸಲು ಮುಂದಾಗಿದ್ದಾರೆ ಎಂದು ಟೀಕಿಸಿದರು.
ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ 22 ಸ್ಥಾನಗಳಲ್ಲಿ ಗೆದ್ದಿದೆ. ಓರ್ವ ಪಕ್ಷೇತರ ಸದಸ್ಯರು ಈಗಾಗಲೇ ಕಾಂಗ್ರೆಸ್ಗೆ ಬೆಂಬಲ ಘೋಷಿಸಿದ್ದಾರೆ. ಇಬ್ಬರು ಎಂಎಲ್ಸಿಗಳು, ಓರ್ವ ಶಾಸಕರಿದ್ದಾರೆ. ಒಟ್ಟು 26 ಮತಗಳು ನಮ್ಮ ಪರ ಇವೆ. ಜೆಡಿಎಸ್ ಕೂಡ ನಮಗೆ ಬೆಂಬಲ ನೀಡಲಿದೆ. ಕಾಂಗ್ರೆಸ್ ಪಕ್ಷವೇ ಮೇಯರ್ ಸ್ಥಾನಕ್ಕೇರಲಿದೆ ಎಂದು ಮಂಜಪ್ಪ ವಿಶ್ವಾಸ ವ್ಯಕ್ತಪಡಿಸಿದರು.