ದಾವಣಗೆರೆ : ಹೊನ್ನಾಳಿ ಮತಕ್ಷೇತ್ರದಲ್ಲಿ ಶಾಸಕ ರೇಣುಕಾಚಾರ್ಯ ಸೋಲಲು ದುರಾಡಳಿತ, ಭ್ರಷ್ಟಾಚಾರ ಕಾರಣವಾಗುತ್ತದೆ ಎಂದು ಹೊನ್ನಾಳಿ ಮಾಜಿ ಶಾಸಕ, ಕಾಂಗ್ರೆಸ್ ಅಭ್ಯರ್ಥಿ ಶಾಂತನಗೌಡರು ಹೇಳಿದರು. ಜಿಲ್ಲೆಯ ಹೊನ್ನಾಳಿ ತಾಲೂಕಿನ ಗೊಲ್ಲರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಕ್ಷೇತ್ರದಲ್ಲಿ ಜಾತಿ ಜಾತಿಗಳ ಮಧ್ಯೆ ಜಗಳ ಹಚ್ಚುವ ಕೆಲಸ ಹಾಗೂ ವ್ಯಾಪಕ ಭ್ರಷ್ಟಾಚಾರ ಮಾಡಿದ್ದಕ್ಕೆ ಈ ಸಲ ಜನ ಶಾಸಕ ಎಂ. ಪಿ. ರೇಣುಕಾಚಾರ್ಯಗೆ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ಸಾವಿರಾರು ಉತ್ತಮ ಮನೆಗಳನ್ನು ಕೆಡವಿ ತಮ್ಮ ಕಾರ್ಯಕರ್ತರಿಗೆ ಐದು ಲಕ್ಷ ಹಣ ಕೊಡಿಸಿದ್ದಾರೆ. ಅವರ ಭ್ರಷ್ಟಾಚಾರ ಒಂದಾ ಎರಡಾ ನೂರಾರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪಿಸಿದರು. ನಾನು ಹೊನ್ನಾಳಿ ಮತಕ್ಷೇತ್ರದಿಂದ ನೂರಕ್ಕೆ ನೂರು ಶೇಕಡಾ ಗೆಲುವು ಸಾಧಿಸುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು, ನನ್ನ ಮೇಲೆ ಐಟಿ ದಾಳಿ ನಡೆದಿದೆ ಎಂದು ಸುದ್ದಿ ಹಬ್ಬಿಸಲಾಗಿದೆ. ಅದು ಶುದ್ಧ ಸುಳ್ಳು. ವಿರೋಧ ಪಕ್ಷದವರು ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ ಎಂದು ಸ್ಪಷ್ಟನೆ ನೀಡಿದರು.
ನಾನು, ನಮ್ಮ ಅಪ್ಪ, ಅಣ್ಣ ಎಲ್ಲರೂ ಇಲ್ಲಿಂದ ಶಾಸಕರಾಗಿದ್ದೇವೆ. ಇಡೀ 50 ವರ್ಷಗಳ ಆಡಳಿತಾವಧಿಯಲ್ಲಿ ಎಲ್ಲಾ ಜಾತಿ ಧರ್ಮದವರ ಪ್ರೋತ್ಸಾಹ ನಮಗೆ ಸಿಕ್ಕಿದೆ. ಈ ಬಾರಿ ಎಲ್ಲರೂ ಉತ್ತಮ ರೀತಿಯಲ್ಲಿ ಮತದಾನ ಮಾಡಿದ್ದಾರೆ. ಜೊತೆಗೆ ಪಕ್ಷದ ಗ್ಯಾರಂಟಿ ಕಾರ್ಡ್ ಕೂಡ ನನಗೆ ಗೆಲ್ಲಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಎಲ್ಲೂ ನನ್ನ ಲೀಡ್ ಕಮ್ಮಿಯಾಗಲ್ಲ. 200ಕ್ಕೂ ಹೆಚ್ಚು ಬೂತ್ ಗಳಲ್ಲಿ ನನಗೆ ಲೀಡ್ ಸಿಗಲಿದೆ. ನಾನು ಯಾವುದೇ ಲೀಡ್ ಬಗ್ಗೆ ನಿರೀಕ್ಷೆ ಇಟ್ಟಿಲ್ಲ. ಒಟ್ಟಿನಲ್ಲಿ ನಾನು ಈ ಬಾರಿ ಗೆಲ್ಲುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ : ಜಾತ್ಯತೀತ ನಾಯಕ ಯಡಿಯೂರಪ್ಪರಿಂದ ಲಿಂಗಾಯತರಿಗೆ ಬಿಜೆಪಿ ಪತ್ರ ಬರೆಯಿಸಿದೆ: ಆಯನೂರು ಮಂಜುನಾಥ್