ದಾವಣಗೆರೆ: ಹೊನ್ನಾಳಿ ಜನರ ನಿದ್ದೆಕೆಡಿಸಿರುವ ಮುಸಿಯ ಸ್ವಲ್ಪ ಯಾಮಾರಿದ್ದರೂ ಸಿಎಂ ರಾಜಕೀಯ ಕಾರ್ಯದರ್ಶಿ ಎಂ. ಪಿ. ರೇಣುಕಾಚಾರ್ಯರ ಮೇಲೆ ದಾಳಿ ನಡೆಸುವ ಸಾಧ್ಯತೆ ಇತ್ತು. ಆದ್ರೆ, ಕೂದಲೆಳೆ ಅಂತರದಲ್ಲಿ ಶಾಸಕರು ಪಾರಾಗಿದ್ದು, ದಾಳಿ ಭೀತಿಯಿಂದ ಆತಂಕಗೊಂಡ ರೇಣುಕಾಚಾರ್ಯ ಹಾಗೂ ಬಿಜೆಪಿ ಮುಖಂಡರು ಆಸ್ಪತ್ರೆಯೊಳಗೆ ಸೇರಿಕೊಂಡ ಘಟನೆ ನಡೆದಿದೆ.
ಹೊನ್ನಾಳಿ ಪಟ್ಟಣದ ನೂರು ಹಾಸಿಗೆಗಳ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಸ್ವಚ್ಛತಾ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಶಾಸಕ ರೇಣುಕಾಚಾರ್ಯ, ಬಿಜೆಪಿ ಮುಖಂಡರು, ಕಾರ್ಯಕರ್ತರು, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಸೇರಿದಂತೆ ಹಲವರು ಆಗಮಿಸಿದ್ದರು. ಆಗ ದಿಢೀರನೇ ಬಂದ ಮುಶ್ಯಾ ಕೆಲಸ ಮಾಡುತ್ತಿದ್ದ ಪೌರ ಕಾರ್ಮಿಕರ ಮೇಲೆ ದಾಳಿ ಮಾಡಿದೆ. ಪೌರ ಕಾರ್ಮಿಕರಾದ ರವಿ, ಅಂಕಣ್ಣ ಎಂಬುವರನ್ನು ಕಚ್ಚಿ ಗಾಯಗೊಳಿಸಿದೆ.
ಈ ವೇಳೆ ಪೌರಕಾರ್ಮಿಕರು ಆಸ್ಪತ್ರೆಯೊಳಗೆ ಓಡಿ ಹೋಗಿ ಬಾಗಿಲು ಹಾಕಿಕೊಂಡು ತಪ್ಪಿಸಿಕೊಂಡರು. ಆದ್ರೆ, ಮತ್ತೊಂದು ಬಾಗಿಲಿನ ಮೂಲಕ ಬಂದ ಮುಶ್ಯಾ ಸೆರೆ ಹಿಡಿಯುವಂತೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎಸ್. ಆರ್. ವೀರಭದ್ರಯ್ಯ ಹಂದಿ ಹಿಡಿಯುವವರಿಗೆ ಸೂಚಿಸಿದರು. ಹಗ್ಗ ಕಚ್ಚಿ ಅಲ್ಲಿಂದಲೂ ಎಸ್ಕೇಪ್ ಆಗಿದೆ.
ಕಳೆದ ಒಂದೂವರೆ ತಿಂಗಳಿನಿಂದ ಸುಮಾರು 30ಕ್ಕೂ ಹೆಚ್ಚು ಜನರ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿರುವ ಮುಶ್ಯಾವನ್ನು ಹಿಡಿಯುವುದೇ ಕಷ್ಟವಾಗಿದೆ. ಯಾರೋ ಪೌರ ಕಾರ್ಮಿಕರು ಮುಶ್ಯಾನನ್ನು ಥಳಿಸಿದ್ದು, ಅದನ್ನೇ ಸೇಡಾಗಿಟ್ಟುಕೊಂಡು ಕಾರ್ಮಿಕರನ್ನೇ ಹೆಚ್ಚಾಗಿ ಟಾರ್ಗೆಟ್ ಮಾಡುತ್ತಿರುವ ಇದು ಜನರಿಗೂ ಉಪಟಳ ಕೊಡುವುದನ್ನು ಬಿಟ್ಟಿಲ್ಲ. ಇದನ್ನು ಹಿಡಿಯಲು ಅರಣ್ಯ ಇಲಾಖೆ, ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಸ್ಥಳೀಯರು ನಡೆಸಿದ ಯಾವ ಕಾರ್ಯಾಚರಣೆಯೂ ಯಶಸ್ವಿಯಾಗಿಲ್ಲ. ಬಡಿಗೆ ಇಟ್ಟುಕೊಂಡು ಸದೆಬಡಿಯಲು ಮಾಡಿದ ಪ್ರಯತ್ನಗಳ, ಅಧಿಕಾರಿಗಳ ಯತ್ನಗಳೂ ವಿಫಲವಾಗಿದೆ. ಖತರ್ನಾಕ್ ಮುಶ್ಯಾ ಮಾತ್ರ ಯಾರ ಕೈಗೂ ಸಿಗದೇ ತಪ್ಪಿಸಿಕೊಂಡು ಓಡಾಡುತ್ತಿದೆ.
ಸದ್ಯ ಜನರನ್ನು ನಿರಂತರವಾಗಿ ಕಾಡುತ್ತಿರುವ ಮುಸಿಯವನ್ನು ಹಿಡಿದು ಕಾಡಿಗಟ್ಟುವಂತೆ ಶಾಸಕ ಎಂ. ಪಿ. ರೇಣುಕಾಚಾರ್ಯ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.