ಹರಿಹರ: ಶ್ರೀಶೈಲ ಪೀಠದ ಲಿಂ. ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ವೀರಶೈವ ಸಿದ್ಧಾಂತವಾದ ಪ್ರಾಚೀನತೆ ಹಾಗೂ ವೈಚಾರಿಕತೆ ಎರಡೂ ಅನುಯಾಯಿಗಳ ನಡುವೆ ಸೇತುವೆಯಾಗಿ ಸೇವೆ ಸಲ್ಲಿಸಿದ್ದರಿಂದ ಅವರು ಸಮನ್ವಯ ಸಿರಿ ಎಂದು ಪ್ರಸಿದ್ಧಿ ಪಡೆದಿದ್ದರು ಎಂದು ಪೀಠದ ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಎಸ್‌ಜೆವಿಪಿ ಕಾಲೇಜಿನ ಎಂ.ಬಿ.ಗುರುಸಿದ್ಧಸ್ವಾಮಿ ಸಭಾಂಗಣದಲ್ಲಿ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿಯವರ ಸಂಸ್ಮರಣೆಯಲ್ಲಿ ಸಮನ್ವಯ ಸಿರಿ ರಾಷ್ಟ್ರೀಯ ಪ್ರಶಸ್ತಿ ಹಾಗೂ ಸೇವಾ ಭೂಷಣ ಪ್ರಶಸ್ತಿ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಧಾರ್ಮಿಕ, ಶಿಕ್ಷಣ, ಸಾಮಾಜಿಕ, ಸಂಸ್ಕೃತಿ, ಆಯುರ್ವೇದ, ಸಾಹಿತ್ಯ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಕೃಷಿ ಮಾಡಿದ್ದ ಸ್ವಾಮೀಜಿ ಆಡು ಮುಟ್ಟದ ಸೊಪ್ಪಿಲ್ಲ ಎಂಬ ಮಾತಿಗೆ ಅನ್ವರ್ಥವಾಗಿದ್ದರು. ಇವರು 70ರ ದಶಕದಲ್ಲಿ ಹರಿಹರದಲ್ಲಿ ಆರಂಭಿಸಿದ್ದ ಶಿಕ್ಷಣ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ. ಅವರ ಆದರ್ಶಗಳು ಇಂದಿನ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡಲಿ ಎಂಬ ಉದ್ದೇಶದಿಂದ ಅವರ ಹೆಸರಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ ಎಂದರು.
ಸಮನ್ವಯ ಸಿರಿ ಪ್ರಶಸ್ತಿ ವಿಜೇತ ಕೆ.ಎನ್.ಜಯಲಿಂಗಪ್ಪ, ಪ್ರಶಸ್ತಿಯೊಂದಿಗೆ ನೀಡುತ್ತಿರುವ 25 ಸಾವಿರ ರೂ. ಹಣವನ್ನು ವಿದ್ಯಾಪೀಠಕ್ಕೆ ವಾಪಸ್ ನೀಡಿ ತಮ್ಮಿಂದ ಮತ್ತೆ 25 ಸಾವಿರ ರೂ. ಜೋಡಿಸಿ ದೇಣಿಗೆ ನೀಡಿದ್ದಾರೆ. ಇದು ಇವರ ಸೇವಾ ಕಾರ್ಯದ ವೈಖರಿ ತೋರುತ್ತದೆ ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಎಸ್.ರಾಮಪ್ಪ ಮಾತನಾಡಿ, ತಾಲೂಕಿನ ಜನತೆಗೆ ಶಿಕ್ಷಣದ ವ್ಯವಸ್ಥೆ ಮಾಡಿರುವ ಎಸ್‌ಜೆವಿಪಿ ವಿವಿ ಪೀಠ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡುತ್ತಿರುವುದು ಸಂತಸದ ವಿಷಯ. ಈ ಕಾಲೇಜಿನಲ್ಲಿ ಶೀಘ್ರವೇ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲಾಗುವುದು ಎಂದರು.
ಸಮನ್ವಯ ಸಿರಿ ಪ್ರಶಸ್ತಿ ಸ್ವೀಕರಿಸಿದ ಕೆ.ಎನ್.ಜಯಲಿಂಗಪ್ಪ ಮಾತನಾಡಿ, ನಾನು ಸುರತ್ಕಲ್‌ನ ಎಂಜನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದ ನಂತರ ರಾಜಕೀಯದಲ್ಲಿ ಉತ್ತಮವಾಗಿ ಬೆಳೆಯುವ ಅವಕಾಶವಿತ್ತು. ಆದರೆ ನಮ್ಮ ತಂದೆಯವರ ಅಪೇಕ್ಷೆಯಂತೆ ನಾನು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡೆ ಎಂದು ಹೇಳಿದರು.
ದಾವಣಗೆರೆಯ ಸ್ತ್ರೀರೋಗ ತಜ್ಞೆ ಡಾ. ಅನ್ನಪೂರ್ಣಮ್ಮ ಹತ್ತಿ, ಹಳೆ ವಿದ್ಯಾರ್ಥಿಗಳಾದ ದಾವಣಗೆರೆ ವಿವಿ ಸಿಂಡಿಕೇಟ್ ಸದಸ್ಯ ಟಿ.ಇನಾಯತ್ ಉಲ್ಲಾ, ತುಳಸಿದಾಸ್ ಪಟೇಲ್, ನಿವೃತ್ತ ಕಚೇರಿ ಸಹಾಯಕರಾದ ಆರ್.ಎಸ್.ತೇಲಂಗಣಿ, ಬಡಿಗೇರ್ ಎನ್.ಎಸ್. ಅವರಿಗೆ ಸೇವಾಭೂಷಣ ಪ್ರಶಸ್ತಿ ನೀಡಲಾಯಿತು. ದಾವಣಗೆರೆ ವಿವಿಗೆ ಪ್ರಥಮ ರ್‍ಯಾಂಕ್ ಪಡೆದ ಶ್ರೀಶೈಲ ಬಿ.ಇಡಿ ಕಾಲೇಜಿನ ಉಮಾಮಹೇಶ್ವರಿಯವರನ್ನು ಸತ್ಕರಿಸಲಾಯಿತು.