ದಾವಣಗೆರೆ: ದಾವಣಗೆರೆ ಉತ್ತರದಲ್ಲಿ ಎಸ್ ಎ ರವೀಂದ್ರನಾಥ್ ಅವರನ್ನು ಗೆಲ್ಲಿಸುವಂತೆ ಸಿಎಂ ಬೊಮ್ಮಾಯಿ ಮತದಾರರಿಗೆ ಕರೆ ನೀಡಿದರು. ನಗರದ ಶಿರಮಗೊಂಡನಹಳ್ಳಿಯಲ್ಲಿ ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನವನ್ನು ಉದ್ಘಾಟಿಸಿ, ಶಾಸಕ ಎಸ್ ರವೀಂದ್ರನಾಥ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದರು.
ಎಸ್ ಎ ರವೀಂದ್ರನಾಥ್ ರಾಜಕೀಯ ಜೀವನ ಅವರ ಹೋರಾಟದ ಹಾದಿಯನ್ನು ಹಲವು ವರ್ಷಗಳಿಂದ ನೋಡಿಕೊಂಡು ಬಂದಿದ್ದೇನೆ. ರವೀಂದ್ರನಾಥ್ ಒಬ್ಬ ಹುಟ್ಟು ರೈತ ಹೋರಾಟಗಾರ. ಅವರು ರಾಜಕೀಯಕ್ಕೆ ಬರಬೇಕು ಎಂದು ಹೋರಾಟ ಮಾಡುತ್ತಿರಲಿಲ್ಲ. ಅಧಿಕಾರ ಇದ್ದಾಗಲೂ ಹಿಂಗೆ ಇದ್ದರೂ ಇಲ್ಲದಿದ್ದಾಗಲೂ ಹಿಂಗೆ ಇದ್ದರು. ರವೀಂದ್ರನಾಥ್ ಅವರ ಒಂದು ಶಕ್ತಿ ಎಂದರೆ ಯಾವುದೇ ಅಧಿಕಾರಕ್ಕೆ ಆಸೆ ಪಟ್ಟವರಲ್ಲ. ಅವರು ಕೇಳಿದ ಎಲ್ಲ ಕೆಲಸಗಳನ್ನು ನಾವು ಮಾಡಿಕೊಟ್ಟಿದ್ದೇವೆ. ನಿರಾಶ್ರಿತರಿಗೆ 100 ಎಕರೆಯಲ್ಲಿ ವಸತಿ ಸೌಲಭ್ಯ ಯೋಜನೆ ಹಾಕಿಕೊಂಡಿದ್ದಾರೆ.
ಅದಕ್ಕೆ ಇನ್ನು 50 ಎಕರೆ ಹೆಚ್ಚು ಸ್ಥಳ ನೀಡಿ ಆ ಬಡಾವಣೆಗೆ ರವೀಂದ್ರನಾಥ್ ರವರ ಹೆಸರು ಇಡುತ್ತೇವೆ. ರವೀಂದ್ರನಾಥ್ರನ್ನು ಮತ್ತೆ ಶಾಸಕರನ್ನಾಗಿ ಮಾಡಿ, ಅವರಿಗೆ ಮತ್ತೊಮ್ಮೆ ಆಶೀರ್ವಾದ ಮಾಡಬೇಕು ಎಂದು ಹೇಳಿದ ಸಿಎಂ ಮತ್ತೆ ರವೀಂದ್ರನಾಥ್ಗೆ ಟಿಕೇಟ್ ನೀಡುವ ಇಂಗಿತವನ್ನು ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಸಿರಿಗೆರೆ ಡಾ.ಶಿವಮೂರ್ತಿ ಶಿವಾಚಾರ್ಯ ಶ್ರೀಗಳು, ರವೀಂದ್ರನಾಥ್ ಮತ್ತು ಸಂಸದ ಜಿ ಎಂ ಸಿದ್ದೇಶ್ವರ್, ಇವರು ಇರುವ ರೀತಿ ಎಲ್ಲರಿಗೂ ಮಾದರಿಯಾಗಬೇಕು. ವಿಧಾನ ಸೌಧದಲ್ಲಿ ಜಂಟಿ ಅಧಿವೇಶನ ನಡೆದ ಸಂದರ್ಭದಲ್ಲಿ ರಾಜ್ಯಪಾಲರು ಮಾತನಾಡುತ್ತಾರೆ. ಅಂತಹದ್ದೇ ಒಂದು ಸಂದರ್ಭ ಇಂದು ಶಿರಮಗೊಂಡನಹಳ್ಳಿಯಲ್ಲಿ ಬಂದಿದೆ.
ಸುಧಾ ವೀರೇಂದ್ರ ಪಾಟೀಲ್ ಸಮುದಾಯ ಭವನದಲ್ಲಿ ಇವತ್ತು ಜಂಟಿ ಅಧಿವೇಶನ ನಡೆಯುತ್ತಿದೆ. ಇದರಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯವರು ಇದ್ದಾರೆ. ಶಾಮನೂರು ಮತ್ತು ರವೀಂದ್ರನಾಥ್ ಅವರು ರಾಣೇಬೆನ್ನೂರಿನ ಅಳಿಯಂದಿರು. ಜಿ ಎಂ ಸಿದ್ದೇಶ್ವರ್ ಕೂಡ ಇದಕ್ಕೆ ಸಂಬಂಧ ಇದೆ ಎಂದರು.
1994 ರಲ್ಲಿ ಐದು ಕ್ಷೇತ್ರಗಳಲ್ಲಿ ಜಾತ್ಯತೀತ ಪಕ್ಷಾತೀತ ಚುನಾವಣೆ ನಡೆಯಬೇಕೆಂದು ಆಶಯ ಇತ್ತು. ಅಂತಹ ಚುನಾವಣೆ ನಡೆಯಲು ನಾವು ಐದು ಕ್ಷೇತ್ರಗಳನ್ನು ಆರಿಸಿದ್ದೆವು. ಆ ಸಂದರ್ಭದಲ್ಲಿ ಎಸ್ ಎ ರವೀಂದ್ರನಾಥ್ ಚುನಾವಣೆಯಲ್ಲಿ ಗೆದ್ದುಬಂದರು. ರವೀಂದ್ರನಾಥ್ ಗಟ್ಟಿ ಹೋರಾಟಗಾರ. ಅವರ ವ್ಯಕ್ತಿತ್ವದಿಂದ ಅವರು ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ.
ನಿಜವಾದ ಮಣ್ಣಿನ ಮಗ ಅವರು, ಹಳ್ಳಿಯಲ್ಲೇ ಹುಟ್ಟಿ ಹಳ್ಳಿಯಲ್ಲೇ ಈ ಮಟ್ಟಕ್ಕೆ ಬೆಳೆದು ಬಂದಿದ್ದಾರೆ. ಶಾಮನೂರು ಜಿ ಎಂ ಸಿದ್ದೇಶ್ವರ್ ಹಾಗೂ ಎಸ್ ಎ ರವೀಂದ್ರನಾಥ್ ಅವರ ಸಂಬಂಧ ಎಲ್ಲರಿಗೂ ಆದರ್ಶವಾಗಬೇಕು. ಸಮುದಾಯ ಭವನವನ್ನು ಅದ್ಭುತವಾಗಿ ಕಟ್ಟಿದ್ದಾರೆ. ಶಾಮನೂರು ವ್ಯವಹಾರ ಚತುರತೆ ಇನ್ನು ಹಾಗೇಯೇ ಇದೆ. ಶಾಮನೂರು, ಎಸ್ ಎ ರವೀಂದ್ರನಾಥ್ ಅವರು ನೂರು ವರ್ಷ ಬದುಕಲಿ ಎಂದರು.
ಇದನ್ನೂ ಓದಿ: ಸಂವಿಧಾನದ ಬಗ್ಗೆ ಗೌರವ ಇದ್ದಲ್ಲಿ ಸುಧಾಕರ್ ರಾಜೀನಾಮೆ ನೀಡಬೇಕು: ವಿ.ಎಸ್ ಉಗ್ರಪ್ಪ