ದಾವಣಗೆರೆ: ಹರಿಹರದಲ್ಲಿ ನಡೆಯುತ್ತಿರುವ ಜಾತ್ರೆ ಕಾರ್ಯಕ್ರಮದಲ್ಲಿ, ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ಹೇಳಿದ ಮಾತೊಂದಕ್ಕೆ ಕೋಪಗೊಂಡ ಸಿಎಂ ಬಿಎಸ್ವೈ ವೇದಿಕೆಯಿಂದ ಎದ್ದು ಹೊರಡಲು ಮುಂದಾದರು.
ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ, ನಮ್ಮ ಸಮಾಜದ ಬೆಳವಣಿಗೆಗೆ ಕಾರಣರಾದ ಮುರುಗೇಶ್ ನಿರಾಣಿ ಅವರಿಗೆ ಸಚಿವ ಸ್ಥಾನ ನೀಡಬೇಕು. ಇಲ್ಲದಿದ್ದರೆ ಪಂಚಮಸಾಲಿ ಸಮಾಜ ನಿಮ್ಮನ್ನು ಕೈಬಿಡುತ್ತದೆ ಎಂಬ ಮಾತು ಹೇಳುತ್ತಿದ್ದಂತೆ ಸಿಡಿಮಿಡಿಗೊಂಡ ಸಿಎಂ ವೇದಿಕೆಯಿಂದ ಎದ್ದು ನಿಂತರು. ಸ್ವಾಮೀಜಿಯವರೇ ನೀವು ಬೆದರಿಕೆ ಹಾಕಬೇಡಿ. ನೀವೇ ಹೀಗೆ ಮಾತನಾಡಿದರೆ ಹೇಗೆ...? ನನ್ನ ಕಷ್ಟವನ್ನೂ ಅರ್ಥ ಮಾಡಿಕೊಳ್ಳಿ. ನೀವು ಹೀಗೆಲ್ಲಾ ಮಾತನಾಡಬಾರದು ಎಂದು ಸಿಎಂ ಯಡಿಯೂರಪ್ಪ ವಚನಾನಂದ ಶ್ರೀಗಳ ವಿರುದ್ಧ ಕೆಂಡಮಂಡಲರಾದರು.
ನೀವು ಯಾವುದೇ ಕಾರಣಕ್ಕೂ ಒಬ್ಬರ ಪರ ಮಾತನಾಡಬಾರದು. ಬೆದರಿಕೆ ಅಥವಾ ಧಮ್ಕಿ ಹಾಕುವ ರೀತಿಯಲ್ಲಿ ಮಾತನಾಡಬಾರದು ಎಂದು ಸಿಎಂ ಯಡಿಯೂರಪ್ಪ ಸಿಟ್ಟಿಗೆದ್ದರು. ಈ ವೇಳೆ ವಚನಾನಂದ ಶ್ರೀಗಳು, ನೀವು ತಾಳ್ಮೆಯುಳ್ಳವರು. ಸಮಾಧಾನದಿಂದ ಇರಿ. ಕುಳಿತುಕೊಳ್ಳಿ. ಸಿಟ್ಟಾಗಬೇಡಿ. ನಾವು ಕುಳಿತು ಮಾತನಾಡೋಣ ಎಂದು ಸಮಾಧಾನಪಡಿಸಿ ಯಡಿಯೂರಪ್ಪರನ್ನು ಕೂರಿಸಿದರು.