ದಾವಣಗೆರೆ: ಶಾಸಕ ಎಂಪಿ ರೇಣುಕಾಚಾರ್ಯ ಅವರ ಸಹೋದರನ ಪುತ್ರ ಚಂದ್ರಶೇಖರ್ ಸಾವಿನ ಪ್ರಕರಣವನ್ನು ಎಲ್ಲ ಕೋನಗಳಿಂದ ತನಿಖೆ ನಡೆಸಬೇಕು. ಈಗಲೇ ಯಾವುದೇ ತೀರ್ಮಾನಕ್ಕೆ ಬರಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ತಮ್ಮ ರಾಜಕೀಯ ಕಾರ್ಯದರ್ಶಿಯೂ ಆಗಿರುವ ಎಂ.ಪಿ.ರೇಣುಕಾಚಾರ್ಯ ಅವರ ಕುಟುಂಬಕ್ಕೆ ಸಾಂತ್ವನ ಹೇಳಿದ ಬಳಿಕ ದಾವಣಗೆರೆಯಲ್ಲಿ ಮಾತನಾಡಿದ ಅವರು, ಚಂದ್ರಶೇಖರ್ ಮರಣೋತ್ತರ ಪರೀಕ್ಷಾ ವರದಿ ಇನ್ನೆರಡು ದಿನಗಳಲ್ಲಿ ಬರಲಿದೆ. ಬಳಿಕ ವಿಧಿವಿಜ್ಞಾನ ವರದಿ, ಪ್ರಕರಣದ ಮರುಸೃಷ್ಟಿ ಮಾಡಿ (ರಿಕ್ರಿಯೇಶನ್ ಆಫ್ ಸೀನ್ ಆಫ್ ಕ್ರೈಂ) ತನಿಖೆ ನಡೆಸಬೇಕು. ಈ ಎಲ್ಲ ತನಿಖೆಗಳ ಬಳಕ ಪ್ರಕರಣದ ನಿಖರತೆ ಗೊತ್ತಾಗಲಿದೆ ಎಂದು ಹೇಳಿದರು.
ಚಂದ್ರಶೇಖರ್ ಅವರ ಸಾವು ಪೋಷಕರಿಗೆ ಭರಿಸಲಾರದ ದುಃಖ. ಮಗ ಚಂದ್ರುವನ್ನು ರೇಣುಕಾಚಾರ್ಯ ಬಹಳ ಪ್ರೀತಿಸುತ್ತಿದ್ದರು. ರೇಣುಕಾಚಾರ್ಯರ ಎಲ್ಲ ಕೆಲಸಗಳಿಗೆ ಹೆಗಲಾಗಿದ್ದರು. ಅಂಥವರನ್ನು ಕಳೆದುಕೊಂಡಿರುವುದು ದುರ್ದೈವದ ಸಂಗತಿ ಎಂದು ವಿಷಾದಿಸಿದರು.
ಕೊಲೆ ಅನುಮಾನಕ್ಕೆ ತನಿಖೆಯೇ ಉತ್ತರ: ಚಂದ್ರಶೇಖರ್ ಅವರನ್ನು ಹತ್ಯೆ ಮಾಡಿರುವ ಶಂಕೆ ಇದೆ. ಆದರೆ, ಎಲ್ಲದಕ್ಕೂ ತನಿಖೆ ಬಳಿಕವೇ ಉತ್ತರ ಸಿಗಲಿದೆ. ರೇಣುಕಾಚಾರ್ಯ ನಿವಾಸಕ್ಕೆ ನಾನು ಮುಖ್ಯಮಂತ್ರಿಯಾಗಿ ಬಂದಿಲ್ಲ. ರೇಣುಕಾಚಾರ್ಯರ ಸಹೋದರನಾಗಿ ಬಂದಿದ್ದೇನೆ. ಅವರ ಜತೆಗೆ ನಿರಂತರ ಸಂಪರ್ಕದಲ್ಲಿದ್ದೆ. ಆದರೂ ಮನಸ್ಸು ತಡೆಯಲಾರದೇ ಬಂದಿದ್ದೇನೆ ಎಂದರು. ಇದೇ ವೇಳೆ ಸಚಿವರಾದ ಭೈರತಿ ಬಸವರಾಜ, ಗೋವಿಂದ ಕಾರಜೋಳ, ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್ ಇದ್ದರು.
ಓದಿ:ವ್ಯಾಪಾರದಲ್ಲಿ ನಷ್ಟ: ರಾತ್ರೋರಾತ್ರಿ ಊರು ಬಿಟ್ಟು ನಾಪತ್ತೆಯಾದ ಗಿರವಿ ಅಂಗಡಿ ಮಾಲೀಕ