ದಾವಣಗೆರೆ : ಇಂದು ರಾತ್ರಿ ದೆಹಲಿಗೆ ಹೋಗ್ತಾ ಇದೀನಿ. ಚೀಫ್ ಜಸ್ಟೀಸ್ ಜೊತೆ ಸಂವಾದ ಇದೆ. ಆದರೆ, ಅಲ್ಲಿ ಸಚಿವ ಸಂಪುಟ ಚರ್ಚೆ ಸಾಧ್ಯತೆ ತೀರ ಕಡಿಮೆ ಇದೆ ಎಂದ್ಹೇಳುವ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ಸಚಿವಾಕಾಂಕ್ಷಿಗಳಿಗೆ ಮತ್ತೆ ನಿರಾಶೆ ಮೂಡಿಸಿದ್ದಾರೆ.
ಜಗಳೂರಿನಲ್ಲಿ ಮಾತನಾಡಿದ ಅವರು, ಇಂದು ರಾತ್ರಿ ದೆಹಲಿಗೆ ಹೋಗ್ತಾ ಇದೀನಿ. ನಾಳೆ ಇಡೀ ದಿನ ಕಾನ್ಫರೆನ್ಸ್ ಇದೆ, ನಾಡಿದ್ದು ಬೆಳಗ್ಗೆ ಬೇಗ ಬರ್ತಾ ಇದೀನಿ ಎಂದು ವಿವರಿಸಿದ ಅವರು, ಕನ್ನಡ-ಹಿಂದಿ ಬಗ್ಗೆ ಸ್ಪಷ್ಟವಾಗಿ ಹೇಳಿದ್ದೀನಿ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಎಂದರು.
ಪಿಎಸ್ಐ ನೇಮಕಾತಿ ಅಕ್ರಮ ವಿಚಾರವಾಗಿ ಮಾತನಾಡಿದ ಅವರು, ನೇಮಕಾತಿ ಕಂಡು ಹಿಡಿದು ಸಿಐಡಿಗೆ ಕೊಟ್ಟಿದ್ದೇ ನಾವು. ಈಗ ಇನ್ನಷ್ಟು ಬುಡಕ್ಕೆ ಹೋಗ್ತಾ ಇದೀವಿ. ಎಷ್ಟೇ ಪ್ರಭಾವಿತರಾಗಿದ್ದರೂ ಕಠಿಣ ಕ್ರಮ ನಿಶ್ಚಿತ. ಕೆಲವರು ರಂಗೋಲಿ ಕೆಳಗೆ ನುಸುಳುವ ಪ್ರವೃತ್ತಿ ಇದೆ. ಅಕ್ರಮವನ್ನ ಸದೆ ಬಡಿಯುತ್ತೇವೆ ಎಂದು ಎಚ್ಚರಿಸಿದರು.
ಇದನ್ನೂ ಓದಿ : ಯಾರೋ ಕಿಟ್ ಕೊಟ್ರೆ, ನಾನು ಅದಕ್ಕೆ ರಿಯಾಕ್ಟ್ ಮಾಡಬೇಕಾ ಎಂದ ಸಿದ್ದರಾಮಯ್ಯ!
1255 ಕೋಟಿ ಯೋಜನೆಗೆ ಚಾಲನೆ : 1,255 ಕೋಟಿ ರೂ. ವೆಚ್ಚದ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಗೆ ದಾವಣಗೆರೆ ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಸಿಎಂ ಚಾಲನೆ ನೀಡಿದರು. ಬರದ ನಾಡಿಗೆ ನೀರು ಹರಿಸುವ ಯೋಜನೆ ಇದಾಗಿದ್ದು, ರಾಷ್ಟ್ರೀಯ ಮಾನ್ಯತೆ ಪಡೆದ ರಾಜ್ಯದ ಮೊದಲ ನೀರಾವರಿ ಯೋಜನೆಯಾಗಿದೆ.
ಸಂಪುಟ ವಿಸ್ತರಣೆ ಸಿಎಂಗೆ ಪರಮಾಧಿಕಾರ : ಸಂಪುಟ ವಿಸ್ತರಣೆ ಮಾಡಲು ಸಿಎಂಗೆ ಪರಮಾಧಿಕಾರ ಇದೆ. ಅವರು ಏನ್ ತೀರ್ಮಾನ ಮಾಡಿದ್ರೂ ಎಲ್ಲರು ಬದ್ಧ ಎಂದು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ತಿಳಿದ್ದಾರೆ. ಎಲ್ಲರಿಗೂ ಸಚಿವನಾಗಬೇಕೆಂಬ ಆಸೆ ಇರುತ್ತದೆ. ಹಿರಿಯರು, ಸಚಿವಾಕಾಂಕ್ಷಿಗಳು ನಮ್ಮಲ್ಲಿ ಇದ್ದಾರೆ. ಆದರೆ, ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ತೀರ್ಮಾನ ಹೈಕಮಾಂಡ್ ಹಾಗೂ ಸಿಎಂಗೆ ಬಿಟ್ಟಿದ್ದು ಎಂದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಪ್ರಕರಣದ ಬಗ್ಗೆ ಮಾತನಾಡಿ, ಈಶ್ವರಪ್ಪ ಕೆಲವೇ ದಿನಗಳಲ್ಲಿ ಆರೋಪ ಮುಕ್ತರಾಗಿ ಹೊರ ಬರುತ್ತಾರೆ. ವರ್ಕ್ ಆರ್ಡರ್ ಇಲ್ಲದೇ ಕೆಲಸ ಮಾಡಿದ್ರೆ ಏನ್ ಮಾಡೋಕೆ ಆಗುತ್ತೆ. ಎಲ್ಲಾ ಪ್ರಕರಣಗಳನ್ನ ಸರ್ಕಾರ ತನಿಖೆಗೆ ವಹಿಸಿದೆ, ಕ್ರಮ ಜರುಗಿಸುತ್ತಿದೆ ಎಂದರು.