ದಾವಣಗೆರೆ: ನಿರ್ಮಾಪಕ ಕೆ. ಮಂಜು ಪುತ್ರ ಶ್ರೇಯಸ್ 'ಪಡ್ಡೆಹುಲಿ' ಚಿತ್ರದ ಶೂಟಿಂಗ್ ವೇಳೆ ತುಂಬಾ ಭಯಪಟ್ಟುಕೊಂಡಿದ್ದರಂತೆ. ಅದೂ ಕ್ರೇಜಿಸ್ಟಾರ್ ರವಿಚಂದ್ರನ್ ಎದುರು ಕ್ಯಾಮೆರಾ ಎದುರಿಸುವಾಗ ಅವರಿಗೆ ಭಯವಿತ್ತಂತೆ.
'ಪಡ್ಡೆಹುಲಿ' ಸಿನಿಮಾದಲ್ಲಿ ರವಿಚಂದ್ರನ್ ನಾಯಕ ನಟನ ತಂದೆಯ ಪಾತ್ರದಲ್ಲಿ ನಟಿಸಿದ್ದಾರೆ. ಸೆಟ್ಗೆ ಕ್ರೇಜಿಸ್ಟಾರ್ ಬಂದ ತಕ್ಷಣ ಚಿತ್ರದ ನಾಯಕ ಶ್ರೇಯಸ್ ತುಂಬಾ ಹೆದರಿದರಂತೆ. ಆಗ ರವಿಚಂದ್ರನ್ ಅವರು ಬಂದು, ಯಾಕೆ ಹೆದರುತ್ತೀಯಾ? ನಾನು ನಿನ್ನ ತಂದೆ ಪಾತ್ರದಲ್ಲಿ ನಟಿಸುತ್ತಿದ್ದೇನೆ. ಹಿಂಜರಿಕೆ ಬೇಡ. ನಿನ್ನ ಹಿಂದೆ ನಾನು ಇರುತ್ತೇನೆ ಎಂದು ಧೈರ್ಯ ತುಂಬಿದರು. ಬಳಿಕ ಆರಾಮಾಗಿ ನಟಿಸಿದೆ ಎಂದು ಚಿತ್ರದ ನಾಯಕ ನಟ ಶ್ರೇಯಸ್ ಹೇಳಿದರು.
ಸಿನಿಮಾ ಪ್ರಮೋಷನ್ಗೆ ಜಿಲ್ಲೆಗೆ ಆಗಮಿಸಿದ ವೇಳೆ ಈ ಇಂಟ್ರೆಸ್ಟಿಂಗ್ ವಿಷಯ ತಿಳಿಸಿದ ಅವರು, ರವಿಚಂದ್ರನ್ ಜೊತೆ ನಟಿಸುವುದು ಸುಲಭವಲ್ಲ. ಅವರು ಲೆಜೆಂಡ್. ನನಗೆ ಅವರ ಜೊತೆ ನಟಿಸಲು ಅವಕಾಶ ಸಿಕ್ಕಿದ್ದು ಖುಷಿ ತಂದಿದೆ. ರಕ್ಷಿತ್ ಶೆಟ್ಟಿ ಕೂಡ ಸಿನಿಮಾದಲ್ಲಿ ನಟಿಸಿರುವುದು ಚಿತ್ರದ ಪ್ಲಸ್ ಪಾಯಿಂಟ್ ಎಂದರು.
ಪಾತ್ರಕ್ಕಾಗಿ ಐದು ವರ್ಷಗಳಿಂದಲೂ ತಯಾರಿ ನಡೆಸುತ್ತಿದ್ದೆ. ಇದಕ್ಕಾಗಿ ಸಾಕಷ್ಟು ಪರಿಶ್ರಮ ಹಾಕಿದ್ದೇನೆ. ಆ್ಯಕ್ಟಿಂಗ್, ಫೈಟಿಂಗ್, ಡ್ಯಾನ್ಸ್ ತರಬೇತಿ ಪಡೆದೆ. ಇದೊಂದು ಫ್ರೆಶ್ ಲವ್ ಸ್ಟೋರಿ. ತಂದೆ ಮಗನ ಸಂಬಂಧದ ಕಥೆ ಅದ್ಭುತವಾಗಿ ಮೂಡಿ ಬಂದಿದೆ. ರಿಯಲಿಸ್ಟಿಕ್ ಆಗಿ ಚಿತ್ರವನ್ನು ನಿರ್ದೇಶಕರು ತೆರೆ ಮೇಲೆ ತಂದಿದ್ದಾರೆ ಎಂದು ಶ್ರೇಯಸ್ ಖುಷಿ ಹಂಚಿಕೊಂಡರು.