ದಾವಣಗೆರೆ : ಶಾಸಕ ಎಂಪಿ ರೇಣುಕಾಚಾರ್ಯ ಸಹೋದರನ ಪುತ್ರ ಚಂದ್ರು ಸಾವಿನ ಪ್ರಕರಣದ ತನಿಖೆಯನ್ನು ಸಿಐಡಿ ನಡೆಸುತ್ತಿದೆ ಎಂದು ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ಹೊನ್ನಾಳಿಯಲ್ಲಿ ಮಾತನಾಡಿದ ಅವರು, ಕೆಲ ದಿನಗಳ ಹಿಂದೆ ಕಾರು ದುರಂತದಲ್ಲಿ ಸಾವನ್ನಪ್ಪಿದ್ದ ಚಂದ್ರಶೇಖರ್ ಸಾವು, ಕೊಲೆ ಅದು ಅಪಘಾತವಲ್ಲ. ಚಂದ್ರು ಸಾವನ್ನಪ್ಪಿ ಒಂದೂವರೆ ತಿಂಗಳಾದರೂ ತನಿಖೆ ಆಗದ ಹಿನ್ನೆಲೆಯಲ್ಲಿ ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಸಿಐಡಿಗೆ ವಹಿಸುವಂತೆ ಮನವಿ ಮಾಡಿಕೊಂಡಿದ್ದೆ. ಅದರಂತೆ ಚಂದ್ರು ಸಾವಿನ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಕಳೆದ ದಿನ ಸಿಐಡಿ ಅಧಿಕಾರಿಗಳು ನನ್ನ ನಿವಾಸಕ್ಕೆ ಭೇಟಿ ನೀಡಿ ಚಂದ್ರು ಸಾವಿನ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಅಪಘಾತದ ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ಮಾಹಿತಿ ನೀಡಿದರು.
ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಸಿಐಡಿ ಅಧಿಕಾರಿಗಳು ಚಂದ್ರು ಸಾವಿನ ಬಗ್ಗೆ ಸ್ನೇಹಿತರಿಂದಲೂ ಮಾಹಿತಿ ಪಡೆದಿದ್ದಾರೆ. ಅಲ್ಲದೇ ಮನೆಯಿಂದ ಹೊರಗಡೆ ಹೋಗಿದ್ದರ ಬಗ್ಗೆ ಹಾಗೂ ಅಪಘಾತ ಯಾವ ರೀತಿ ಆಗಿದೆ ಎಂದು ಅಧಿಕಾರಿಗಳು ಮಾಹಿತಿ ಕಲೆ ಹಾಕಿದ್ದಾರೆ. ಪ್ರಕರಣ ತನಿಖೆ ಹಂತದಲ್ಲಿದೆ. ಸಿಐಡಿ ತನಿಖೆಯಿಂದ ಚಂದ್ರು ಸಾವಿನ ಪ್ರಕರಣದ ಸತ್ಯಾಂಶ ಹೊರಬೀಳಲಿದೆ ಎಂದರು.
ಇದು ಅಪಘಾತ ಅಲ್ಲ. ಇದೊಂದು ಕೊಲೆ : ಚಂದ್ರು ಸಾವು ಅಪಘಾತ ಅಲ್ವೇ ಅಲ್ಲ, ಇದೊಂದು ಕೊಲೆ. ಚಂದ್ರು ಹೊನ್ನಾಳಿ ಕ್ಷೇತ್ರದಲ್ಲಿ ಉತ್ತಮ ಒಡನಾಟ ಹೊಂದಿದ್ದ. ಚಂದ್ರಶೇಖರ ನೆನೆದು ಇವತ್ತಿಗೂ ಕ್ಷೇತ್ರದ ಜನ ಕಣ್ಣೀರು ಹಾಕುತ್ತಾರೆ. ಚಂದ್ರುವಿನ ಸಾವಿನಲ್ಲಿ ನಾನು ಯಾವುದೇ ರಾಜಕೀಯ ಮಾಡುವುದಿಲ್ಲ. ಚಂದ್ರು ಆತ್ಮಕ್ಕೆ ಶಾಂತಿ ಸಿಗಬೇಕು, ನ್ಯಾಯ ಸಿಗಬೇಕು ಎಂದರು. ತನಿಖೆ ವಿಳಂಬವಾಗಿದ್ದರಿಂದ ನೋವಾಗಿದೆ. ಎಲ್ಲವನ್ನು ತಡೆದುಕೊಳ್ಳುವ ಶಕ್ತಿ ಭಗವಂತ ನೀಡಿದ್ದಾನೆ ಎಂದು ಪ್ರತಿಕ್ರಿಯಿಸಿದರು.
ಕಾಂಗ್ರೆಸ್ ಬಸ್ ಯಾತ್ರೆಗೆ ರೇಣುಕಾಚಾರ್ಯ ವ್ಯಂಗ್ಯ : ಕಾಂಗ್ರೆಸ್ ನವರು ಬಸ್ ನಲ್ಲಾದರೂ ಹೋಗ್ಲಿ, ಫ್ಲೈಟ್, ಬೈಕ್ ನಲ್ಲಾದರೂ ಹೋಗ್ಲಿ. ಅದಕ್ಕೆ ನಾವು ಏನ್ಮಾಡ್ಬೇಕು. ಕಾಂಗ್ರೆಸ್ ಮುಳುಗಿದ ಹಡಗು, ಮುಳುಗಿದ ಹಡಗನ್ನು ಯಾರಾದ್ರೂ ಹತ್ತಲು ಹೋಗ್ತಾರಾ, ಕಾಂಗ್ರೆಸ್ ನವರು ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ.
ಸಿದ್ದರಾಮಯ್ಯ ಅಮೃತ ಮಹೋತ್ಸವದಲ್ಲಿ ರಾಹುಲ್ ಗಾಂಧಿಯವರು ಡಿಕೆಶಿ ಮತ್ತು ಸಿದ್ದರಾಮಯ್ಯರನ್ನು ಒಂದುಗೂಡಿಸಿದ್ರು. ಆದರೆ, ಅವರಿಬ್ಬರು ಬೆಂಗಳೂರಿಗೆ ಹೋದ ಮೇಲೆ ಮತ್ತೆ ಅದೇ ರಾಗ ಅದೇ ಹಾಡು ಎಂಬಂತಾಗಿದೆ. ಸಿಎಂ ಕುರ್ಚಿಗಾಗಿ ಸಿದ್ದರಾಮಯ್ಯ, ಡಿಕೆಶಿ, ಎಂಬಿ ಪಾಟೀಲ್, ಪರಮೇಶ್ವರ್ ಹೀಗೆ ಕಚ್ಚಾಡ್ತಿದ್ದಾರೆ ಎಂದರು.
ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ : ನಾನು ಸಚಿವ ಸ್ಥಾನದ ಆಕಾಂಕ್ಷಿ ಅಲ್ಲ. ನಾನು ದೆಹಲಿಗೆ ತೆರಳುತ್ತಿದ್ದೇನೆ. ಅಲ್ಲಿ ಕೆಲ ಸಚಿವರನ್ನು ಭೇಟಿ ಮಾಡುವೆ. ಮತ್ತೆ ನನ್ನ ಕ್ಷೇತ್ರದಲ್ಲಿ 30 ಸಾವಿರ ಮತಗಳಿಂದ ಗೆಲ್ಲುವುದಾಗಿ ವಿಶ್ವಾಸ ವ್ಯಕ್ತಪಡಿಸಿದರು.
ಬಿಎಸ್ ಯಡಿಯೂರಪ್ಪ ಒಬ್ಬ ಮಾಸ್ ಲೀಡರ್. ಅವರನ್ನು ಪಕ್ಷದಲ್ಲಿ ಕಡೆಗಣಿಸಿಲ್ಲ. ರಾಜ್ಯ ರಾಷ್ಟ್ರೀಯ ನಾಯಕರು ಯಡಿಯೂರಪ್ಪ ಅವರನ್ನು ಮೂಲೆಗುಂಪು ಮಾಡುವ ಪ್ರಶ್ನೆಯೇ ಇಲ್ಲ. ಯಡಿಯೂರಪ್ಪ 150 ಸ್ಥಾನ ಗೆಲ್ಲುವ ಸಂಕಲ್ಪ ಮಾಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ : ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು: ಶಾಸಕ ಎಂ ಪಿ ರೇಣುಕಾಚಾರ್ಯ