ಹರಿಹರ: ಶ್ರೀ ಹರಿಹರೇಶ್ವರ ದೇವಸ್ಥಾನದ ಬ್ರಹ್ಮ ರಥೋತ್ಸವ ನಿಮಿತ್ತ ಫೆ.5ರಿಂದ 10ರವರೆಗೆ ಜಾನುವಾರು (ದನಗಳ) ಜಾತ್ರೆ ಹಾಗೂ ಮಾರಾಟ ಮೇಳವನ್ನು ಹರಿಹರೇಶ್ವರ ದೇವಸ್ಥಾನ ಹಿಂಭಾಗದ ನದಿ ದಡದಲ್ಲಿ ಆಯೋಜಿಸಲಾಗಿದೆ ಎಂದು ಶ್ರೀ ಹರಿಹರೇಶ್ವರ ರೈತ ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಳೆದ ವರ್ಷ ನಡೆಸಿದ ಜಾನುವಾರುಗಳ ಜಾತ್ರೆ ಯಶಸ್ವಿಯಾಗಿ ನಡೆಯಿತು. ಆದ್ದರಿಂದ ಈ ಬಾರಿಯೂ ಜಾತ್ರೆ ಆಯೋಜಿಸಿದ್ದು ಮಾರಾಟ ಹಾಗೂ ಖರೀದಿದಾರರಿಗೆ ಹೆಚ್ಚಿನ ಸೌಲಭ್ಯ ಕಲ್ಪಿಸಲಾಗಿದೆ ಎಂದರು.
ರಾಜ್ಯ ಹಾಗೂ ಹೊರ ರಾಜ್ಯಗಳಿಂದಲೂ ರಾಸುಗಳು ಮಾರಾಟಕ್ಕೆ ಬರಲಿವೆ. ಈ ಬಾರಿ ಹೆಚ್ಚಿನ ಹಾಗೂ ವಿವಿಧ ತಳಿಯ ರಾಸುಗಳು ಬರುವ ನೀರೀಕ್ಷೆ ಇದೆ. ವಿವಿಧ ತಳಿಯ ಆಕಳು, ಎಮ್ಮೆಗಳ ಮಾರಾಟ ಹಾಗೂ ಖರೀದಿಯಿಂದಾಗಿ ರೈತರಿಗೆ ಅನುಕೂಲವಾಗಲಿದೆ. ಉಚಿತವಾಗಿ ರಾಸುಗಳಿಗೆ ಮೇವು, ನೀರು ಮತ್ತು ಮಾರಾಟಗಾರರಿಗೆ ಹಾಗೂ ಖರೀದಿಗೆ ಬರುವ ರೈತರಿಗೆ ಊಟದ ವ್ಯವಸ್ಥೆಯನ್ನು ಸೇವಾ ಸಮಿತಿಯಿಂದ ಮಾಡಲಾಗುತ್ತಿದೆ ಎಂದು ತಿಳಿಸಿದರು.